ಜುಲೈ 19 ಶುಕ್ರವಾರ, ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೊಮ್ಮೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದು ಕೊಡುವ ನಿರೀಕ್ಷೆಯಲ್ಲಿದ್ದಾರೆ. ಕೇವಲ ಪದಕವಷ್ಟೇ ಅಲ್ಲ, ಈ ಬಾರಿಯೂ ಟೋಕಿಯೊ ಒಲಿಂಪಿಕ್ಸ್‌ನಂತೆ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಬಳಿಕ ನೀರಜ್ ಅವರು 2022ರ ಡೈಮಂಡ್ ಲೀಗ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ, 2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ನೀರಜ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ಇದೀಗ ಪ್ಯಾರಿಸ್‌ನಲ್ಲಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರೆ, ವಿಶ್ವದ ಶ್ರೇಷ್ಠ ಅಥ್ಲೀಟ್‌ಗಳ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಲಿಕೊಳ್ಳಲಿದ್ದಾರೆ. ಈಗಾಗಲೇ ಸತತ ಚಿನ್ನದ ಪದಕ ಗೆದ್ದಿರುವುದರಿಂದ ನೀರಜ್ ಅವರಿಗೆ 'ಗೋಲ್ಡನ್ ಬಾಯ್' ಹೆಸರು ಕೂಡ ಬಂದಿದೆ.
ಒಲಿಂಪಿಕ್ಸ್ ಇತಿಹಾಸದಲ್ಲಿ, ಶ್ರೇಷ್ಠ ಜಾವೆಲಿನ್ ಎಸೆತಗಾರ ಜೆಕ್ ಗಣರಾಜ್ಯದ ಜಾನ್ ಝೆಲೆಜ್ನಿ ಸತತ ಮೂರು ಬಾರಿ ಚಿನ್ನ ಗೆಲ್ಲುವ ಮೂಲಕ ತನ್ನ ಪ್ರಶಸ್ತಿಯನ್ನು ಹೆಚ್ಚು ಬಾರಿ ಉಳಿಸಿಕೊಂಡಿದ್ದಾರೆ.
ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ವಿಶೇಷ ದಾಖಲೆಗಳನ್ನು ಮಾಡಿದ್ದಾರೆ. ಜಾನ್ ಜೆಲೆಜ್ನಿ ಅವರ ದಾಖಲೆಯನ್ನು ನೀರಜ್ ಮುರಿಯುವುದು ತುಂಬಾ ಕಷ್ಟ, ಆದರೆ ಅಸಾಧ್ಯವಲ್ಲ.
ಒಂದು ವೇಳೆ ನೀರಜ್ ತಮ್ಮ ಚಿನ್ನ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಗೋಲ್ಡನ್ ಬಾಯ್ ಖಂಡಿತವಾಗಿಯೂ ಜಾನ್ ಜೆಲಾಜ್ನಿ ಅವರ ಪ್ರದರ್ಶನಕ್ಕೆ ಸ್ವಲ್ಪ ಹತ್ತಿರವಾಗಬಹುದು.
ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ 2004 ಮತ್ತು 2008 ರಲ್ಲಿ ತಮ್ಮ ಪ್ರಶಸ್ತಿಯನ್ನು ಸಮರ್ಥಿಸಿಕೊಂಡರು. ಈ ಮೊದಲು 1908 ಮತ್ತು 1912ರಲ್ಲಿ ಎರಿಕ್ ಲ್ಯಾಮಿಂಗ್, 1920 ಮತ್ತು 1924 ರಲ್ಲಿ ಫಿನ್‌ಲ್ಯಾಂಡ್‌ನ ಜಾನಿ ಮೈರಾ ಅವರು ಸತತವಾಗಿ ಚಿನ್ನ ಗೆಲ್ಲುವ ಮೂಲಕ ಇಂತಹ ಸಾಧನೆ ಮಾಡಿದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ 90 ಮೀಟರ್ ಎಸೆತವನ್ನು ಮುಟ್ಟುವ ನಿರೀಕ್ಷೆಯಲ್ಲಿದ್ದಾರೆ. ಜಾನ್ ಝೆಲೆಜ್ನಿ ಅವರು ಜರ್ಮನಿಯಲ್ಲಿ ನಡೆದ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ 98.48 ಮೀಟರ್ ಎಸೆದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.
ವಿಶ್ವದ ಅಗ್ರ-5 ಜಾವೆಲಿನ್ ಎಸೆತಗಾರರ ಬಗ್ಗೆ ನೋಡುವುದಾರೆ, ಜಾನ್ ಜೆಲೆಜ್ನಿ ಅವರ ಹೆಸರು ಮಾತ್ರ ಮೂರು ಸ್ಥಾನಗಳಲ್ಲಿದೆ. ನಂಬರ್ ಒನ್ ಹೊರತುಪಡಿಸಿ, ಜೆಲೆಜ್ನಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.
ಜರ್ಮನಿಯ ಜೊಹಾನ್ಸ್ ವೆಟರ್ 97.76 ಮೀಟರ್ ಮತ್ತು 96.29 ಮೀಟರ್ ಎಸೆದು 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಅಂದರೆ ಇಬ್ಬರು ಆಟಗಾರರು ಮಾತ್ರ ವಿಶ್ವದ ಅಗ್ರ-5 ಜಾವೆಲಿನ್ ಥ್ರೋ (ಪುರುಷರು) ಹೊಂದಿದ್ದಾರೆ.
ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ವೈಯಕ್ತಿಕ ಚಿನ್ನದ ಪದಕ ಗೆದ್ದ ಎರಡನೇ ಅಥ್ಲೀಟ್ ಆಗಿದ್ದಾರೆ. ಇದಕ್ಕೂ ಮುನ್ನ ಅಭಿನವ್ ಬಿಂದ್ರಾ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದು ಕೊಟ್ಟಿದ್ದರು. ಶೂಟಿಂಗ್ ನಲ್ಲಿ ಈ ಪದಕ ಬಂದಿತ್ತು.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಸೇರಿದಂತೆ ಒಟ್ಟು 7 ಮೆಡಲ್‌ಗಳನ್ನು ಗೆದ್ದುಕೊಂಡಿತ್ತು. ಭಾರತವು ಪ್ಯಾರಿಸ್ ಒಲಿಂಪಿಕ್ಸ್‌ಗೆ 117 ಆಟಗಾರರ ತಂಡವನ್ನು ಕಳುಹಿಸಿದೆ. ಅದರಲ್ಲಿ ಗರಿಷ್ಠ ಸಂಖ್ಯೆಯ 29 ಆಟಗಾರರು ಅಥ್ಲೆಟಿಕ್ಸ್‌ನಲ್ಲಿದ್ದಾರೆ.