ಜುಲೈ 26 ಶುಕ್ರವಾರ, ಒಲಂಪಿಕ್ಸ್ ಇತಿಹಾಸದಲ್ಲೇ ದಾಖಲೆ ಸಂಖ್ಯೆಯ ಟಿಕೆಟ್‌ಗಳನ್ನು ಈ ಬಾರಿ ಮಾರಾಟ ಅಥವಾ ವಿತರಣೆ ಮಾಡಲಾಗಿದೆ ಎಂದು 2024ರ ಪ್ಯಾರಿಸ್ ಒಲಿಂಪಿಕ್ಸ್ ಸಂಘಟಕರು ತಿಳಿಸಿದ್ದಾರೆ.
ಈ ವರ್ಷದ ಒಲಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗೆ ಈಗಾಗಲೇ 97 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಮಾರಾಟವಾಗಲಿವೆ ಎಂದು ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ 1 ಕೋಟಿ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕ್ರೀಡಾಕೂಟದ ಜನಪ್ರಿಯತೆ ಮತ್ತು ಈ ವರ್ಷದ ಸ್ಪರ್ಧೆಗಳ ಅಭೂತಪೂರ್ವ ಪ್ರಮಾಣದ ಹೊರತಾಗಿಯೂ, ಇನ್ನೂ ಅನೇಕ ಟಿಕೆಟ್‌ಗಳು ಉಳಿದಿವೆ ಎನ್ನಲಾಗಿದೆ.
ಇದಕ್ಕೂ ಮುನ್ನ 1996 ರಲ್ಲಿ ಅಟ್ಲಾಂಟಾದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಸಂದರ್ಭದಲ್ಲಿ 83 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಅದು ಈವರಗಿನ ದಾಖಲೆ ಆಗಿತ್ತು. ಆದರೆ ಇದೀಗ ಒಲಿಂಪಿಕ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ ದಾಖಲೆಗಳನ್ನು ಪ್ಯಾರಿಸ್ ಕ್ರೀಡಾಕೂಟ ಮುರಿದಿದೆ.
ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ದುಬಾರಿಯಾಗಿದ್ದು, ಅವುಗಳನ್ನು ಖರೀದಿಸುವುದು ಸಾಮಾನ್ಯ ಜನರಿಗೆ ಕಷ್ಟವಾಗಲಿದೆ ಎಂಬ ಟೀಕೆಗಳು ಕೇಳಿ ಬಂದಿದ್ದವು.
ಹೀಗಾಗಿ ಕ್ರೀಡಾಕೂಟಕ್ಕೆ ಹೆಚ್ಚಿನ ಜನರನ್ನ ಸೆಳೆಯುವ ದೃಷ್ಟಿಯಿಂದ ಸ್ಥಳೀಯ ಯುವಕರು, ಯುವ ಕ್ರೀಡಾಪಟುಗಳು, ವಿಕಲಚೇತನರು ಮತ್ತು ಇತರರಿಗೆ ಸುಮಾರು 10 ಲಕ್ಷದಷ್ಟ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿತ್ತು.
ಪ್ಯಾರಿಸ್ ಒಲಿಂಪಿಕ್ಸ್ 2024 ಉದ್ಘಾಟನಾ ಸಮಾರಂಭ: ಇಂದು ಪ್ಯಾರಿಸ್ ಒಲಿಂಪಿಕ್ಸ್ 2024 ಅದ್ಭುತ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಇದರಲ್ಲಿ ಪ್ರತಿಷ್ಠಿತ ಸೀನ್ ನದಿಯಲ್ಲಿ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕ್ರೀಡಾಂಗಣದ ಹೊರಗೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ನಡೆಯುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು.