ಆಗಸ್ಟ್ 13 ಮಂಗಳವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವಾದರೂ ಕೋಟ್ಯಾಂತರ ಭಾರತೀಯರು ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರ ಬೆಳ್ಳಿ ಪದಕಕ್ಕಾಗಿ ಕಾಯುತ್ತಿದ್ದಾರೆ. ಆದರೆ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್ ಮೇಲ್ಮನವಿ ಅರ್ಜಿಯ ವಿಚಾರಣೆಯ ತೀರ್ಪ ಅನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು (ಸಿಎಎಸ್) ಮುಂದೂಡಿದೆ.
ಇಂದು ರಾತ್ರಿ 9:30 ಗಂಟೆಗೆ ಸಿಎಎಸ್ ನೀಡುವ ತೀರ್ಪಿಗಾಗಿ ಇಡೀ ಭಾರತ ಕಾಯುತ್ತಿತ್ತು. ಆದರೆ ಸಿಎಎಸ್ ತನ್ನ ನಿರ್ಧಾರವನ್ನು ಆಗಸ್ಟ್ 16 ಕ್ಕೆ ಮುಂದೂಡಿದೆ. ಹೀಗಾಗಿ ಭಾರತೀಯರು ಇನ್ನೂ ಮೂರು ದಿನಗಳ ಕಾಲ ಸಿಎಎಸ್ ತೀರ್ಪಿಗಾಗಿ ಕಾಯುವಂತಾಗಿದೆ.
ಈಗಾಗಲೇ ವಿನೇಶ್ ಪ್ರಕರಣದ ವಿಚಾರಣೆ ಮುಗಿದಿದ್ದು, ತೀರ್ಪನ್ನು ಮೂರನೇ ಬಾರಿಗೆ ಮುಂದೂಡಿಕೆ ಮಾಡಲಾಗಿದೆ.
ವಿನೇಶ್ ಅರ್ಜಿಯ ತೀರ್ಪನ್ನು ಸಿಎಎಸ್ ಮತ್ತಷ್ಟು ವಿಳಂಬ ಮಾಡುವುದಾಗಿ ತಿಳಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ 2024ರ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್ ಅವರು ಜಂಟಿಯಾಗಿ ಬೆಳ್ಳಿ ಪದಕವನ್ನು ನೀಡುವಂತೆ ಸಿಎಎಸ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಯಾವುದೇ ನಿರ್ಧಾರ ತೆಗೆದುಕೊಂಡರು ಅದನ್ನು ಪ್ರಶ್ನಿಸುವಂತಿಲ್ಲ. ಈ ನಿರ್ಧಾರ ಎಲ್ಲಾ ಸಂದರ್ಭಗಳಲ್ಲಿ ಮಾನ್ಯವಾಗಿರುತ್ತದೆ. ಇದಕ್ಕಾಗಿಯೇ ಸಿಎಎಸ್ ಅನ್ನು ಸಾಮಾನ್ಯವಾಗಿ ಕ್ರೀಡಾ ಪ್ರಪಂಚದ "ಸುಪ್ರೀಂ ಕೋರ್ಟ್" ಎಂದು ಕರೆಯಲಾಗುತ್ತದೆ. ಸಿಎಎಸ್ ನಿರ್ಧಾರಗಳನ್ನು ಇನ್ನೊಂದು ನ್ಯಾಯಾಲಯದಲ್ಲಿ ಪ್ರಶ್ನಿಸಲು ಯಾವುದೇ ಅವಕಾಶಗಳಿರುವುದಿಲ್ಲ.
ಪ್ಯಾರಿಸ್ ಕ್ರೀಡಾಕೂಟ ತೆರೆ ಕಾಣುವ ಒಂದು ದಿನ ಮುನ್ನ ಅಂದರೆ ಆಗಸ್ಟ್ 10 ರಂದೇ ತೀರ್ಪು ನೀಡುವ ನಿರೀಕ್ಷೆ ಇತ್ತು. ಆದರೆ ತೀರ್ಪನ್ನು ಆಗಸ್ಟ್ 13ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ದಿನಾಂಕವನ್ನು ಆಗಸ್ಟ್ 16ಕ್ಕೆ ಮುಂದೂಡಿರುವುದರಿಂದ ಶುಕ್ರವಾರದವರೆಗೆ ಭಾರತೀಯ ಕ್ರೀಡಾಭಿಮಾನಿಗಳು ತೀರ್ಪಿಗಾಗಿ ಕಾಯುವಂತ ಪರಸ್ಥಿತಿ ಎದುರಾಗಿದೆ.