ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಇಂದು ತೆರೆ ಬೀಳಲಿದೆ. ಭಾರತ ಈ ಕ್ರೀಡಾ ಕೂಟದಲ್ಲಿ ಚೇತೋಹಾರಿ ಪ್ರದರ್ಶನ ನೀಡಿದೆ. ಕಳೆದ ಒಲಿಂಪಿಕ್ಸ್‌ಗೆ ಹೋಲಿಸಿದರೆ ಈ ಬಾರಿ ಭಾರತ ಒಂದು ಪದಕ ಕಡಿಮೆ ಗೆದ್ದಿದೆ. ಆದರೆ ಈ ಬಾರಿ ಭಾರತಕ್ಕೆ ಇನ್ನು ಹೆಚ್ಚಿನ ಪದಕವನ್ನು ಗೆಲ್ಲುವ ಸುವರ್ಣ ಅವಕಾಶ ಇತ್ತು.
ಭಾರತ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಒಟ್ಟು ಆರು ಪದಕವನ್ನು ಗೆದ್ದು ಕೊಂಡಿದೆ. ಭಾರತದ ಸ್ಟಾರ್ ಜಾವೆಲಿನ್ ಥ್ರೊ ಸ್ಟೆಷಲಿಸ್ಟ್ ನೀರಜ್ ಚೋಪ್ರಾ ಬೆಳ್ಳಿ ಸಾಧನೆ ಮಾಡಿದರೆ, ಉಳಿದ ಕ್ರೀಡಾ ಪಟುಗಳು ಕಂಚಿನ ಸಾಧನೆ ಮಾಡಿದ್ದಾರೆ. ಆದರೆ ಭಾರತೀಯ ಕ್ರೀಡಾ ಪಟುಗಳ ಭರವಸೆಯನ್ನು ಮೂಡಿಸಿದ್ದಾರೆ. ಭಾರತ ಜಸ್ಟ್ ಮಿಸ್ ಮಾಡಿಕೊಂಡ ಪದಕದ ಮಾಹಿತಿ ಇಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಎರಡು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ಆಟಗಾರ್ತಿ ಮನು ಭಾಕರ್ (Manu Bhaker). ಇವರು ಮಿಕ್ಸಡ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸರಬ್‌ಜೋತ್ ಸಿಂಗ್ ಜೊತೆಗೂಡಿ ಕಂಚು ಹಾಗೂ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
ಮನು ಅವರಿಗೆ ಈ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆಲ್ಲುವ ಅವಕಾಶ ಇತ್ತು. ಅದು ಜಸ್ಟ್ ಮಿಸ್ ಆಗಿದೆ. ಇವರು ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದಲ್ಲೂ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಮನು ಜಸ್ಟ್ ಪದಕವನ್ನು ಮಿಸ್ ಮಾಡಿಕೊಂಡರು. ಈ ಸ್ಪರ್ಧೆಯಲ್ಲಿ ಮನು 28 ಅಂಕಗಳನ್ನು ಕಲೆ ಹಾಕಿ ನಾಲ್ಕನೇ ಸ್ಥಾನವನ್ನು ಪಡೆದರು.
ಭಾರತ ಶೂಟಿಂಗ್‌ನಲ್ಲಿ ಮತ್ತೊಂದು ಪದಕವನ್ನು ಗೆಲ್ಲುವ ಅವಕಾಶ ಇತ್ತು. ಈ ಅವಕಾಶ ಸಹ ಕೊಂಚದರಲ್ಲಿ ಮಿಸ್ ಆಗಿದೆ. ಭಾರತದ ಅರ್ಜುನ್ ಬಬುತಾ (Arjun Babuta) ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಫೈನಲ್‌ನಲ್ಲಿ ಒಟ್ಟು 208.4 ಅಂಕಗಳನ್ನು ಕಲೆ ಹಾಕಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಭಾರತದ ಭರವಸೆಯ ಕ್ರೀಡಾಪಟಗಳಾದ ಅಂಕಿತಾ ಭಕತ್ (Ankita Bhakat) ಮತ್ತು ಧೀರಜ್ ಬೊಮ್ಮದೇವರ (Dhiraj Bommadevara) ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಯುಎಸ್‌ಎ ವಿರುದ್ಧ ಸೋಲು ಕಂಡರು.
ಅನಂತಜೀತ್ ಸಿಂಗ್ ನರುಕಾ (Anantjeet Singh Naruka) ಮಹೇಶ್ವರಿ ಚೌಹಾಣ್ (Maheshwari Chauhan) ಅವರು ಸ್ಕಿಟ್ ಮಿಶ್ರ ತಂಡ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇವರು ಕಂಚಿನ ಪದಕದ ಹೋರಾಟದಲ್ಲಿ ಜಸ್ಟ್ 1 ಅಂಕದಿಂದ ಚೀನಾ ವಿರುದ್ಧ ಸೋಲು ಕಂಡರು. ಚೀನಾ 44 ಅಂಕ ಕಲೆ ಹಾಕಿದ್ದರೆ, ಭಾರತ 43 ಅಂಕ ಕಲೆ ಹಾಕಿತು.

ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ (lakshya sen) ಅವರು ಸೆಮಿಫೈನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿ ಕಂಚಿನ ಪದಕಕ್ಕಾಗಿ ಹೋರಾಡ ಬೇಕಾಯಿತು. ಈ ಪಂದ್ಯದಲ್ಲಿ ಅವರು ಮುನ್ನಡೆ ಸಾಧಿಸಿದರೂ, ಎರಡು ಹಾಗೂ ಮುರನೇ ಸೆಟ್‌ನಲ್ಲಿ ಅಂಕಗಳಿಕೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದರಿಂದ ಈ ವಿಭಾಗದಲ್ಲೂ ಕಂಚು ಮಿಸ್ ಆಯಿತು.
ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಭಾರತದ ಭರವಸೆಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು (Mirabai Chanu Saikhom)ಅವರು ಗಾಯದ ಬಳಿಕ ಮೈದಾನಕ್ಕೆ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಆದರೆ ಇವರು ಸಹ ಒಂದು ಕೇಜಿ ವ್ಯತ್ಯಾಸದಿಂದ ತಮ್ಮ ಎರಡನೇ ಒಲಿಂಪಿಕ್ಸ್ ಪದಕದಿಂದ ವಂಚಿತರಾದರು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಇವರು ಒಟ್ಟು 199 ಕೆಜಿ ಭಾರ ಎತ್ತಿದ್ದರು. ಕಂಚಿನ ಪದಕ ಗೆದ್ದ ಥಾಯ್ಲೆಂಡ್‌ನ ಸುದೋರ್ಚನಾ ಖಂಬಾವೊ ಅವರು 200 ಕೆ.ಜಿ ಎತ್ತಿದ್ದರು.

ಭಾರತದ ಸ್ಟಾರ್ ಕುಸ್ತಿ ಪಟು ವಿನೇಶ್ ಪೋಗಟ್ ಪೋಡಿಯಂ ಮೇಲೆ ಏರುವುದು ಫಿಕ್ಸ್ ಆಗಿತ್ತು. ಆದರೆ ಫೈನಲ್‌ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಯಿತು. ವಿನೇಶ್ ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್ ವಿಭಾಗದಲ್ಲಿ ಸೆಮಿಫೈನಲ್ ಪಂದ್ಯವನ್ನು ಗೆದ್ದು ಫೈನಲ್‌ಗೆ ಪ್ರವೇಶ ಪಡೆದಿದ್ದರು. ಫೈನಲ್‌ನಲ್ಲಿ ಇವರು ಮ್ಯಾಟ್ ಎಂಟ್ರಿ ನೀಡಿದ್ದರೂ ಪದಕ್ ಫಿಕ್ಸ್ ಆಗಿತ್ತು. ಆದರೆ ಆಗಿದ್ದೆ ಬೇರೆಯದ್ದು. ಇವರನ್ನು ಅನರ್ಹಗೊಳಿಸಲಾಗಿದ್ದು, ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೊರೆ ಹೋಗಿದ್ದಾರೆ.