ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಕೂಟ ಮುಕ್ತಾಯವಾಗಿದೆ. ಎಲ್ಲ ದೇಶಗಳ ಕ್ರೀಡಾ ಪಟುಗಳು ತಮ್ಮ ತಮ್ಮ ದೇಶಕ್ಕೆ ಮರಳಿದ್ದಾರೆ. ಈ ಮೆಗಾ ಈವೆಂಟ್‌ನಲ್ಲಿ ಭಾರತ ಸಹ ಸ್ಥಿರ ಪ್ರದರ್ಶನ ನೀಡಿದೆ. ಈ ಟೂರ್ನಿಯಲ್ಲಿ ಭಾರತ ಒಟ್ಟು ಆರು ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಕ್ರೀಡಾ ಕೂಟದಲ್ಲಿ ಭಾರತದ ಪರ 117 ಅಥ್ಲೀಟ್‌ಗಳು ಭಾಗವಹಿಸಿದ್ದರು.
ಭಾರತದ ಕ್ರೀಡಾ ಪಟುಗಳು ಈಗ ತವರಿನತ್ತ ಮುಖ ಮಾಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾಗವಹಿಸಿರುವ ಎಲ್ಲಾ ಭಾರತೀಯ ಕ್ರೀಡಾಪಟುಗಳನ್ನು ಆಗಸ್ಟ್ 15 ರಂದು ಅಂದರೆ ಭಾರತದ ಸ್ವಾತಂತ್ರ್ಯ ದಿನದಂದು ಭೇಟಿಯಾಗಲಿದ್ದಾರೆ.

ಬೆಳಗ್ಗೆ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಕಾರ್ಯಕ್ರಮವನ್ನು ಮುಗಿಸಿದ ಬಳಿಕ ಈ ಭೇಟಿಗೆ ಟೈಮ್ ಫಿಕ್ಸ್ ಆಗಿದೆ. ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿ ಅವರು ಮಧ್ಯಾಹ್ನ 1 ಗಂಟೆಗೆ ಇಡೀ ಭಾರತ ತಂಡವನ್ನು ಭೇಟಿಯಾಗಲಿದ್ದಾರೆ. ಇದೇ ವೇಳೆ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಎಲ್ಲ ಕ್ರೀಡಾ ಪಟುಗಳಿಗೆ ಆಗಸ್ಟ್ 15ರ ಕಾರ್ಯಕ್ರಮಕ್ಕೆ ಕೆಂಪು ಕೋಟೆಗೆ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇಂಡಿಯಾ ಟುಡೇ ಪ್ರಕಾರ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಎಲ್ಲಾ 117 ಕ್ರೀಡಾಪಟುಗಳು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಉಪಸ್ಥಿತರಿರುತ್ತಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾರತದ ಪರ ಪದಕ ಸಾಧನೆ ಮಾಡಿರುವ ಕ್ರೀಡಾಪಟುಗಳನ್ನು ಪ್ರತ್ಯೇಕವಾಗಿ ಮಾತನಾಡಿಸಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಪದಕ ವಿಜೇತ ಕ್ರೀಡಾ ಪಟುಗಳು ಪದಕವನ್ನು ಗೆದ್ದಾಗಲೇ, ಪ್ರಧಾನಿ ನರೇಂದ್ರ ಮೋದಿ ಆ ಕ್ರೀಡಾ ಪಟುಗಳಿಗೆ ಕರೆ ಮಾಡಿ ಮಾತನಾಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ತಾಣದಲ್ಲಿ ಈ ಮೊದಲೇ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕ್ರೀಡಾ ಪಟುವಿನ ಮುಂದಿನ ಪಯಣಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಮಹಿಳೆಯರ 50 ಕೆ.ಜಿ ಫ್ರಿ ಸ್ಟೈಲ್ ವಿಭಾಗದಲ್ಲಿ ಭಾರತದ ವಿನೇಶ್ ಪೋಗಟ್ ಅವರು ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನವೇ ವಿನೇಶ್ ಅವರು ಅನರ್ಹಗೊಂಡರು. ಇವರು ನಿಗದಿತ ತೂಕಕ್ಕಿಂತ 100 ಗ್ರಾಮ್ ಹೆಚ್ಚಿನ ತೂಕವನ್ನು ಹೊಂದಿದ್ದರು. ಹೀಗಾಗಿ ಪ್ರಶಸ್ತಿ ಸುತ್ತಿನ ಕಾದಾಟ ನಡೆಸಲು ಸಾಧ್ಯವೇ ಆಗಿರಲಿಲ್ಲ. ತಮ್ಮ ಮೇಲಿನ ಅನರ್ಹತೆಯನ್ನು ಪ್ರಶ್ನಿಸಿ ವಿನೇಶ್ ಪೋಗೊಟ್ ಕ್ರೀಡಾ ಮಧ್ಯಸ್ಥಿಕೆ ಕೋರ್ಟ್‌ಗೆ ಮೊರೆ ಹೋಗಿದ್ದರು.
ವಿನೇಶ್ ಪೋಗಟ್ ಅವರು ಅನರ್ಹರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ವಿನೇಶ್ ಅವರಿಗೆ ಟ್ವೀಟ್ ಮೂಲಕ ಬೆಂಬಲವನ್ನು ಸೂಚಿಸಿದ್ದರು. ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್ ಎಂದು ಹೇಳಿದ್ದರು. ವಿನೇಶ್ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು, ಅವರು ಆಗಾಗ್ಗೆ ಇಂತಹ ಘಟನೆಗಳು ಹೃದಯವನ್ನು ಒಡೆಯುತ್ತವೆ ಎಂದು ಹೇಳಿದ್ದರು.