ಚೆಸ್ ವಿಶ್ವಕಪ್‌ನಲ್ಲಿ ಭಾರತದಆರ್ ಪ್ರಜ್ಞಾನಂದ ಫೈನಲ್‌ಗೆ ಪ್ರವೇಶಿಸುವ ಮೂಲಕ ಚೆಸ್ ವಿಶ್ವಕಪ್‌ನ ಫೈನಲ್‌ಗೆ ಪ್ರವೇಶ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್ ಮುಖಾಮುಖಿಯಲ್ಲಿ ನಂಬರ್ 1 ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಪ್ರಜ್ಞಾನಂದ ಎದುರಿಸಲಿದ್ದಾರೆ.
18ರ ಹರೆಯದ ಪ್ರಜ್ಞಾನಂದ ಅವರ ಈ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಐತಿಹಾಸಿಕ ಫೈನಲ್ ಪಂದ್ಯಕ್ಕೆ ಶುಭಹಾರೈಸಲಾಗುತ್ತಿದೆ. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಭಾರತದ ಯುವ ಚೆಸ್ ಆಟಗಾರನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು ಫೈನಲ್ ಪಂದ್ಯಕ್ಕಾಗಿ ಶುಭಹಾರೈಸಿದ್ದಾರೆ. ಅಲ್ಲದೆ ಫೈನಲ್ ಪಂದ್ಯದಲ್ಲಿ ಇಡೀ ದೇಶದ ಜನ ತಮ್ಮೊಂದಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

"ವಿಶ್ವಕಪ್ ಫೈನಲ್‌ಗೆ ಪ್ರವೇಶ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೊಸ ಇತಿಹಾಸವನ್ನು ನೀವು ಬರೆದಿದ್ದೀರಿ. ನಿಮ್ಮ ಈ ಪ್ರಯಾಣ ಸಾಕಷ್ಟು ಹೋರಾಟದಿಂದ ಕೂಡಿದೆ. ಚೆಸ್ ಬೋರ್ಡ್ ಸಿದ್ಧವಾಗಿದೆ. ಪ್ರತಿಯೊಂದು ನಡೆ ಕೂಡ ಮುಖ್ಯ. ನಿಮಗೆ ಒಳ್ಳೆಯದಾಗಲಿ. ಭಾರತ ನಿಮ್ಮೊಂದಿಗೆ ಇದೆ" ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಇನ್ನು ಫೈನಲ್‌ಗೆ ಪ್ರವೇಶ ಪಡೆದ ಬಳಿಕ ಪ್ರತಿಕ್ರಿಯೆ ನೀಡಿರುವ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಕಾರ್ಲ್ಸನ್ ಅವರನ್ನು ಫೈನಲ್‌ನಲ್ಲಿ ಎದುರಿಸಲಿದ್ದೇನೆ ಎಂದು ಭಾವಿಸಿರಲಿಲ್ಲ ಎಂದಿದ್ದಾರೆ. ಅಲ್ಲದೆ ಫೈನಲ್ ಪಂದ್ಯದಲ್ಲಿ ತನ್ನ ಅತ್ಯುತ್ತಮ ಹೋರಾಟ ನಡೆಸುವುದಾಗಿಯೂ ಅವರು ಹೇಳಿದ್ದಾರೆ.
"ನಾನು ಈ ಟೂರ್ನಮೆಂಟ್‌ನಲ್ಲಿ ಮ್ಯಾಗ್ನಸ್ ಅವರನ್ನು ಎದುರಿಸಲಿದ್ದೇನೆ ಎಂದು ಭಾವಿಸಿರಲಿಲ್ಲ. ಯಾಕೆಂದರೆ ಅವರನ್ನು ಎದುರಿಸುವ ಒಂದೇ ಅವಕಾಶವೆಂದರೆ ಫೈನಲ್ ಪಂದ್ಯ ಮಾತ್ರವಾಗಿತ್ತು. ನಾನು ಇಲ್ಲಿ ಫೈನಲ್‌ಗೆ ಪ್ರವೇಶಿಸುವ ನಿರೀಕ್ಷೆ ಹೊಂದಿರಲಿಲ್ಲ. ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನಷ್ಟೇ ನಡೆಸಲಿದ್ದೇನೆ. ಏನಾಗಲಿದೆ ಎಂದು ನೋಡೋಣ" ಎಂದು ಪ್ರಜ್ಞಾನಂದ ಫೈನಲ್‌ಗೆ ಪ್ರವೇಶ ಪಡೆದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಭಾನುವಾರ ಸೆಮಿಫೈನಲ್‌ನ ಎರಡು ಗೇಮ್ಸ್‌ಗಳಲ್ಲಿಯೂ ಪ್ರಜ್ಞಾನಂದ ಡ್ರಾ ಸಾಧಿಸಿದ್ದರು. ಹೀಗಾಗಿ ಸೋಮವಾರ ನಡೆದ ಟೈ ಬ್ರೇಕರ್‌ನಲ್ಲಿ ಫಲಿತಾಂಶ ಪಡೆದುಕೊಳ್ಳಲಾಗಿದೆ. ಟೈಬ್ರೇಕರ್‌ನಲ್ಲಿ 2ನೇ ಶ್ರೇಯಾಂಕಿ ಚೆಸ್ ಪಟು ಫ್ಯಾಬಿಯಾನೋ ಕರುವಾನ ಭಾರೀ ಪೈಪೋಟಿ ನೀಡಿದ್ದರು. ಆದರೆ ಕೆಲವೊಂದು ಪ್ರಮುಖ ನಡೆಗಳಲ್ಲಿ ಭಾರತೀಯ ಆಟಗಾರ ಮೇಲುಗೈ ಸಾಧಿಸಿದ್ದರು. ಹೀಗಾಗಿ ಇಲ್ಲಿಯೂ ಡ್ರಾನತ್ತ ಮುನ್ನಡೆಸುವಲ್ಲಿ ಭಾರತೀಯ ಆಟಗಾರ ಯಶಸ್ವಿಯಾಗಿದ್ದರು.
ಎರಡನೇ ಟೈ ಬ್ರೇಕರ್‌ನಲ್ಲಿಯೂ ಪ್ರಜ್ಞಾನಂದ ಫ್ರಾಬಿಯಾನೋ ಗೆಲುವಿಗೆ ಅಡ್ಡಿಯಾದರು. ಇಲ್ಲಿಯೂ ಪಂದ್ಯ 10+10 ಟೈ ಬ್ರೇಕರ್‌ನತ್ತ ಮುನ್ನಡೆದಿತ್ತು. ಬಳಿಕ ರ್ಯಾಪಿಡ್ ಟೈಬ್ರೇಕರ್‌ನಲ್ಲಿ ಪ್ರಜ್ಞಾನಂದ ಫ್ಯಾಬಿಯಾನೋ ವಿರುದ್ಧ ಮೇಲುಗೈ ಸಾಧಿಸಿದರು. ಇಲ್ಲಿ ಗೆಲುವು ಸಾಧಿಸುವಲ್ಲಿ ಭಾರತೀಯ ಯಶಸ್ವಿಯಾಗಿದ್ದರು. ಅಂತಿಮವಾಗಿ ಪ್ರಜ್ಞಾನಂದ 3.5-2.5 ಅಂತರದಿಂದ ಫ್ಯಾಬಿಯಾನೋ ಕರುವಾನ ಅವರನ್ನು ಸೋಲಿಸಿ ಐತಿಹಾಸಿಕ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.