PT Usha's Husband V.Srinivasan Passes Away: ಖ್ಯಾತ ಮಾಜಿ ಅಥ್ಲೀಟ್, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸಂಸದೆ ಪಿ.ಟಿ.ಉಷಾ ಅವರ ಪತಿ ವಿ.ಶ್ರೀನಿವಾಸನ್ (67) ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂಪಾಪ ಸೂಚಿಸಿದ್ದಾರೆ.
ಶುಕ್ರವಾರ ಮುಂಜಾನೆ ತಮ್ಮ ನಿವಾಸದಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದ ಶ್ರೀನಿವಾಸನ್ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಶ್ರೀನಿವಾಸನ್ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ದುಃಖದ ಸುದ್ದಿಯನ್ನು ತಿಳಿದು ಪ್ರಧಾನಿ ನರೇಂದ್ರ ಮೋದಿ ಅವರು ಪಿ.ಟಿ. ಉಷಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಶ್ರೀನಿವಾಸನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕಠಿಣ ಸಂದರ್ಭದಲ್ಲಿ ಉಷಾ ಕುಟುಂಬಕ್ಕೆ ಧೈರ್ಯ ನೀಡುವಂತೆ ಪ್ರಧಾನಿ ಪ್ರಾರ್ಥಿಸಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದ ಶ್ರೀನಿವಾಸನ್ ಅವರು, ಉಷಾ ಅವರ ಕ್ರೀಡಾ ಜೀವನದಲ್ಲಿ ಬೆಂಬಲವಾಗಿದ್ದರು. ಅವರ ಪ್ರತಿಯೊಂದು ಪ್ರಮುಖ ಹಂತದಲ್ಲೂ ನೆರಳಿನಂತೆ ಜೊತೆಯಾಗಿದ್ದ ಅವರು, ಉಷಾ ಅವರ ಯಶಸ್ಸಿನ ಹಿಂದೆ ನಿಂತ ಶಕ್ತಿಯಾಗಿ ಗುರುತಿಸಿಕೊಂಡಿದ್ದರು. ಇನ್ನೂ ಈ ದಂಪತಿಗೆ ಉಜ್ವಲ್ ಎಂಬ ಒಬ್ಬ ಪುತ್ರನಿದ್ದಾನೆ. ಕ್ರೀಡಾ ಹಾಗೂ ಸಾರ್ವಜನಿಕ ವಲಯದಲ್ಲಿ ಶ್ರೀನಿವಾಸನ್ ಅವರ ನಿಧನಕ್ಕೆ ಸಂತಾಪ ಸೂಚನೆಗಳು ಹರಿದು ಬರುತ್ತಿವೆ.