ಭಾರತ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದ ನಿವಾಸಿಯಾಗಿದ್ದು, ಇತ್ತೀಚಿಗೆ ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಿದ್ದಾರೆ.
2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆರ್‌ಸಿಬಿ ತಂಡದ ಪರ ಆಡಿದ ಶ್ರೇಯಾಂಕಾ ಪಾಟೀಲ್ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಡಬ್ಲ್ಯುಪಿಎಲ್ ಟ್ರೋಫಿ ಗೆದ್ದ ನಂತರ, ಮೊದಲ ಬಾರಿಗೆ ಕೋಳಕೂರು ಗ್ರಾಮಕ್ಕೆ ಆಗಮಿಸಿದ ಶ್ರೇಯಾಂಕಾ ಪಾಟೀಲ್‌ರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.

ಶ್ರೇಯಾಂಕಾ ಪಾಟೀಲ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಪುಷ್ಪವೃಷ್ಟಿಯೊಂದಿಗೆ ಗ್ರಾಮದ ಯುವಸಮೂಹ ಸಂಭ್ರಮಿಸಿದರು. ಇದೇ ವೇಳೆ ಕಲಬುರಗಿ ನಗರದಲ್ಲಿ ಜಿಲ್ಲಾಡಳಿತ ವತಿಯಿಂದಲೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೇಯಾಂಕಾ ಪಾಟೀಲ್ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್, ನಾನು ಕಲಬುರಗಿಗೆ ಬಂದಾಗೆಲ್ಲಾ ನಮ್ಮ ಅಜ್ಜ ಕೋಳಕೋರು ಗ್ರಾಮಕ್ಕೆ ಕರೆದುಕೊಂಡು ಬರುತ್ತಿದ್ದರು. ನನ್ನ ಯಶಸ್ಸನ್ನು ನಿಮ್ಮೊಂದಿಗೆ ಸಂಭ್ರಮಿಸಲು ತುಂಬಾನೇ ಖುಷಿ ಆಗುತ್ತಿದೆ. ನಾನು ಕೋಳಕೂರಿಗೆ ಬಂದಿರುವುದಕ್ಕೆ ನನಗೆ ತುಂಬಾನೇ ಖುಷಿಯಾಗ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಮಕ್ಕಳಿಗೆ, "ನೀವು ಯಾವುದೇ ಕ್ರೀಡೆ ಆಯ್ಕೆ ಮಾಡಿಕೊಂಡರೂ ಶ್ರದ್ಧೆಯಿಂದ ಆಟವಾಡಿ. ಅದು ಕ್ರೀಡೆಯಾಗಿರಲಿ ಅಥವಾ ಅಭ್ಯಾಸ ಆಗಿರಲಿ, ನೀವು ಆಯ್ಕೆ ಮಾಡಿಕೊಂಡ ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡಿ," ಎಂದು ಶ್ರೇಯಾಂಕಾ ಪಾಟೀಲ್ ಸಲಹೆ ನೀಡಿದರು.

2024ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅತಿ ವಿಕೆಟ್ ಪಡೆದ ಬೌಲರ್ ಎನಿಸಿದ ಆರ್‌ಸಿಬಿ ತಂಡದ ಶ್ರೇಯಾಂಕಾ ಪಾಟೀಲ್ 13 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡರು.
ಅಲ್ಲದೆ, ಶ್ರೇಯಾಂಕಾ ಪಾಟೀಲ್ ಅವರು ಡಬ್ಲ್ಯುಪಿಎಲ್ 2024ರ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಸಹ ಗೆದ್ದರು. ಇನ್ನು ಆರ್‌ಸಿಬಿ ತಂಡದ ಮತ್ತೋರ್ವ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅವರು 347 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದುಕೊಂಡರು.
2024ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಪ್ರಶಸ್ತಿ ಗೆಲುವಿನಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಬಹು ಮುಖ್ಯ ಪಾತ್ರ ವಹಿಸಿದರು.
ಇನ್ನು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದ ಶ್ರೇಯಾಂಕಾ ಪಾಟೀಲ್ ತಮ್ಮ ತಂದೆ ರಾಜೇಶ್ ಪಾಟೀಲ್ ಅವರೊಂದಿಗಿನ ತಮಾಷೆಯ ನೆನಪುಗಳನ್ನು ಹಂಚಿಕೊಂಡಿದ್ದರು. ನಾನು ಪಂದ್ಯ ಮುಗಿಸಿ ಮನೆಗೆ ಬರುತ್ತಿದ್ದಂತೆ ತಂದೆ, ನಾನಾಗಿದ್ದರೆ ಬಾಯಿಯಲ್ಲಿಯೇ ಕ್ಯಾಚ್ ಹಿಡಿಯುತ್ತಿದ್ದೆ ಅಂತ ಕಾಲೆಳೆಯುತ್ತಿದ್ದರು. ಅಲ್ಲದೇ ನಾನು ನಿನ್ನ ಬೌಲಿಂಗ್ಗೆ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳುತ್ತಿದ್ದರು ಎಂದು ತಿಳಿಸಿದ್ದರು.
ಶ್ರೇಯಾಂಕಾ ಪಾಟೀಲ್ ತಂದೆ ಜೊತೆ ತಮಾಷೆಯಾಗಿ ಜಗಳವಾಡುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿತ್ತು. ತಂದೆ-ಮಗಳ ನಡುವಿನ ಬಾಂಧವ್ಯ ನೋಡಿದ ನೆಟ್ಟಿಗರು ಮೆಚ್ಚುಗೆಯ ಸುರಿಮಳೆ ಸುರಿಸಿದ್ದರು. ಅಲ್ಲದೇ ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಮುಂದಿನ ವೃತ್ತಿಜೀವನಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದರು.
ಇತ್ತೀಚಿಗೆ ಶ್ರೇಯಾಂಕಾ ಪಾಟೀಲ್ ಅಭ್ಯಾಸ ಮಾಡುತ್ತಿದ್ದಾಗ ನೀಡಿದ ಹೇಳಿಕೆ ಭಾರೀ ವೈರಲ್ ಆಗಿತ್ತು. "ಖಡಕ್ ರೊಟ್ಟಿ, ಶೇಂಗಾ ಚಟ್ನಿ, ಎಣಗಾಯಿ ಪಲ್ಯ ಕೊಟ್ರೆ ಇವಾಗ್ಲೂ ಇಲ್ಲೇ ಕುತ್ಕೊಂಡು ನಿಂತೀನಿ, ಅಷ್ಟು ಇಷ್ಟ. ನಮ್ಮ ಅಮ್ಮ ಮಾಡೋದು, ನಮ್ ಅಜ್ಜಿ ತುಂಬಾ ಚೆನ್ನಾಗಿ ಮಾಡ್ತಾರೆ. ಅದು ತಿಂದ್ರೇನೆ ಒಂಥರಾ ತೃಪ್ತಿ. ಫಿಜ್ಜಾ, ಬರ್ಗರ್ ನಾನ್ ಇಷ್ಟಪಡಲ್ಲ," ಎಂದಿದ್ದರು.
ಶ್ರೇಯಾಂಕಾ ಪಾಟೀಲ್ ಕರ್ನಾಟಕ ಮಹಿಳಾ ತಂಡದಿಂದ ಕಳೆದ ವರ್ಷ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ನಂತರ ಅಲ್ಲಿನ ಉತ್ತಮ ಪ್ರದರ್ಶನವು ಅವರನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‌ವರೆಗೂ ಕರೆದುಕೊಂಡು ಹೋಯಿತು.
2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮಿಂಚಿದ ಬಳಿಕ ಶ್ರೇಯಾಂಕಾ ಪಾಟೀಲ್ ಅವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದರು.
ಶ್ರೇಯಾಂಕಾ ಪಾಟೀಲ್ ತನ್ನ ಉತ್ಸಾಹಭರಿತ ವ್ಯಕ್ತಿತ್ವ, ಪಟಪಟನೆ ಮಾತನಾಡುವ ಮತ್ತು ಕ್ರಿಕೆಟ್ ಬಗೆಗಿನ ಅತಿಯಾದ ಒಲವಿನಿಂದ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಹೊಸ ವಾತಾವರಣ ನಿರ್ಮಿಸಿದ್ದಾರೆ.