
ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ಬಾಲ್ಯದ ನೆಚ್ಚಿನ ನಟ, ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್‌ರನ್ನು ಭೇಟಿ ಮಾಡಿದ್ದಾರೆ. ರಜನಿಕಾಂತ್‌ರ ಅಪ್ಪಟ ಅಭಿಮಾನಿಯಾಗಿರುವ ಸಂಜು ಸ್ಯಾಮ್ಸನ್ ತಮ್ಮ ನೆಚ್ಚಿನ ನಟನ ಜೊತೆ ತೆಗೆಸಿಕೊಂಡಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿರುವ ಅವರು 21 ವರ್ಷಗಳ ನಂತರ ರಜಿನಿಕಾಂತ್‌ರನ್ನು ಭೇಟಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. "7ನೇ ವರ್ಷದಲ್ಲಿ ನಾನು ರಜನಿಕಾಂತ್‌ರ ಅಭಿಮಾನಿಯಾಗಿದ್ದೆ. ನಾನು ರಜನಿ ಸರ್ ಮನೆಗೆ ಹೋಗಿ ಭೇಟಿಯಾಗುತ್ತೇನೆ ಎಂದು ನಾನು ನನ್ನ ಪೋಷಕರಿಗೆ ಹೇಳಿದ್ದೆ, 21 ವರ್ಷಗಳ ನಂತರ ರಜನಿಕಾಂತ್ ಅವರು ನನ್ನನ್ನು ಆಹ್ವಾನಿಸಿದ್ದಾರೆ, ಆ ದಿನ ಈಗ ಬಂದಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ತಾನು ಸೂಪರ್ ಸ್ಟಾರ್ ರಜನಿಕಾಂತ್‌ರ ಅಭಿಮಾನಿ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದರು. ಲಾಕ್‌ಡೌನ್‌ನಲ್ಲಿ ದಿನಚರಿ ಹೇಗಿತ್ತು ಎನ್ನುವ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಕೇರಳದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ನೀಡಿದ ಸಂದರ್ಶನದಲ್ಲಿ ಹಲವು ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದರು.
ತಾನು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸ್ಟೀವ್ ವಾ ಅವರ ಪುಸ್ತಕಗಳನ್ನು ಓದುತ್ತೇನೆ ಮತ್ತು ಧ್ಯಾನ ಮಾಡುತ್ತೇನೆ ಎಂದು ಹೇಳಿದ್ದರು. ಸ್ಯಾಮ್ಸನ್ ಅವರು ರಜನಿಕಾಂತ್ ಸಿನಿಮಾಗಳು ಮತ್ತು ಮಲಯಾಳಂ ಸಿನಿಮಾಗಳನ್ನು ಬಹಳಷ್ಟು ನೋಡುತ್ತೇನೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದರು.

ಐಪಿಎಲ್‌ಗಾಗಿ ಸಂಜು ಸ್ಯಾಮ್ಸನ್ ತಯಾರಿ
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ರಾಜಸ್ತಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಸಿದ್ಧತೆ ಆರಂಭಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗದೆ ನಿರಾಸೆ ಅನುಭವಿಸಿದ ಸ್ಯಾಮ್ಸನ್ ಐಪಿಎಲ್‌ನತ್ತ ಗಮನ ಹರಿಸಿದ್ದಾರೆ.
ಶ್ರೇಯಸ್ ಅಯ್ಯರ್ ಗಾಯಗೊಂಡ ಬಳಿಕ ಅವರ ಬದಲಾಗಿ ಸಂಜು ಸ್ಯಾಮ್ಸನ್ ಅವಕಾಶ ಪಡೆಯುವ ಸಾಧ್ಯತೆ ಇತ್ತಾದರೂ ಅದೂ ಕೂಡ ಸಾಧ್ಯವಾಗಲಿಲ್ಲ. ಭಾರತ ತಂಡದ ಆಯ್ಕೆದಾರರಿಂದ ಸ್ಯಾಮ್ಸನ್ ಪದೇ ಪದೇ ಕಡೆಗಣಿಸಲ್ಪಿಟ್ಟಿದ್ದಾರೆ. ಅಭಿಮಾನಿಗಳು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಬಾರಿ ರನ್ನರ್ ಅಪ್ ಆಗಿದ್ದ ರಾಜಸ್ತಾನ್
2022ರ ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ಅಮೋಘ ಪ್ರದರ್ಶನ ನೀಡಿತ್ತು. ಫೈನಲ್ ತಲುಪಿದ್ದ ಸಂಜು ಸ್ಯಾಮ್ಸನ್ ಪಡೆ ಫೈನಲ್‌ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೋಲನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಐಪಿಎಲ್ 2023ರಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆಯೊಂದಿಗೆ ಕಣಕ್ಕಿಳಿಯಲಿದೆ. ಏಪ್ರಿಲ್ 2ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಶಿಮ್ರಾನ್ ಹೆಟ್ಮೆಯರ್, ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್ ಮತ್ತು ಆರ್ ಅಶ್ವಿನ್‌ರಂತಹ ಆಟಗಾರರನ್ನು ಹೊಂದಿದ್ದು ಬಲಿಷ್ಠ ತಂಡವಾಗಿದೆ.