ಸಿಯೋಲ್ ಒಲಿಂಪಿಕ್ಸ್‌ನ 100 ಮೀ. ಓಟದ ಸ್ಪರ್ಧೆ 'ಫಿಕ್ಸ್' ಆಗಿತ್ತು: ಜಾನ್ಸನ್

ಒಟ್ಟಾವಾ, ನವೆಂಬರ್ 2: ಸೌತ್ ಕೊರಿಯಾದ ಸಿಯೋಲ್ ನಲ್ಲಿ ನಡೆದಿದ್ದ 1988ರ ಒಲಿಂಪಿಕ್ಸ್ ನ ಪುರುಷರ 100 ಮೀ. ಓಟದ ಸ್ಪರ್ಧೆ ಫಿಕ್ಸ್ ಮಾಡಲಾಗಿತ್ತು ಎಂದು ಕೆನಡಾದ ಒಲಂಪಿಕ್ಸ್ ಅಥ್ಲೀಟ್ ಬೆನ್ ಜಾನ್ಸನ್ ಹೇಳಿದ್ದಾರೆ. ಜಾನ್ಸನ್ ಆ ಒಲಿಂಪಿಕ್ಸ್ ಸ್ಪರ್ಧೆಯ ಬಳಿಕ ನಿಷೇಧಕ್ಕೊಳಗಾಗಿದ್ದರು.
1988ರ ಸಿಯೋಲ್ ಒಲಿಂಪಿಕ್ಸ್‌ನ 100 ಮೀ. ರೇಸ್ ನಲ್ಲಿ ಜಾನ್ಸನ್ ಬಂಗಾರ ಗೆದ್ದಿದ್ದರು. ಆದರೆ ಅನಂತರ ಉದ್ದೀಪನ ಮದ್ದು ಸೇವನೆ ಆರೋಪದಿಂದ ಬೆನ್ ಕೈಯಿಂದ ಬಂಗಾರ ಕಸಿದು ಅಮೆರಿಕಾದ ಓಟಗಾರ ಕಾರ್ಲ್ ಲೆವಿಸ್ ಗೆ ನೀಡಲಾಗಿತ್ತು. ಇವೆಲ್ಲವೂ ಪೂರ್ವ ನಿರ್ಧರಿತ ಪ್ಲ್ಯಾನ್ ಎಂದು ಜಾನ್ಸನ್ ಅಂದಿನ ಪ್ರಕರಣವನ್ನು ದೂರಿದ್ದಾರೆ.
ಜಾನ್ಸನ್ ಹೇಳುವ ಪ್ರಕಾರ, 100 ಮೀ. ರೇಸ್ ಫೈನಲ್ ನಲ್ಲಿ ಪಾಲ್ಗೊಂಡಿದ್ದ 8 ಮಂದಿಯಲ್ಲಿ ಆರೂ ಓಟಗಾರರ ಮೇಲೆ ನಿಷೇಧಿತ ಸ್ಟೆರಾಯ್ಡ್ ಸ್ಟನೊಜೊಲಾಲ್ ಉದ್ದೀಪನ ಸೇವನೆ ಆರೋಪ ಕೇಳಿ ಬಂದಿತ್ತು. ಆದರೆ ಅಂತಿಮವಾಗಿ ಜಾನ್ಸನ್ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಅವರ ಮೇಲೆ ನಿಷೇಧ ಹೇರಲಾಗಿತ್ತು.
ಘಟನೆಯಾಗಿ 30 ವರ್ಷಗಳ ಬಳಿಕ ಮಾತನಾಡುತ್ತ ಜಾನ್ಸನ್, 'ಸಿಯೋಲ್ ನಲ್ಲಿ ಏನೆಲ್ಲಾ ನಡೆಯಿತೋ ಅದೆಲ್ಲಾ ಪೂರ್ವ ನಿರ್ಧರಿತ. ಪ್ರಿ-ಪ್ಲ್ಯಾನ್ಡ್ ಎಂಬುದು ನನಗೆ ಗೊತ್ತಿದೆ. ಅವತ್ತಿನ ರೇಸನ್ನು ಫಿಕ್ಸ್ ಮಾಡಲಾಗಿತ್ತು, ಯಾಕೆಂದರೆ ಬಂಗಾರ ಗೆದ್ದುಕೊಳ್ಳಲು ಅಮೆರಿಕಾ ಬಯಸಿತ್ತು' ಎಂದು ಹೇಳಿರುವುದನ್ನು ಕೆನಡಾದ ಮಾಧ್ಯಮ 'ದ ಸ್ಟಾರ್' ವರದಿ ಮಾಡಿದೆ.
ಸಿಯೋಲ್ ಒಲಿಂಪಿಕ್ಸ್ ನ 100 ಮೀ. ದೂರವನ್ನು ಜಾನ್ಸನ್ 9.80 ಸೆಕೆಂಡ್ ವೇಗದಲ್ಲಿ ಕ್ರಮಿಸಿದ್ದರು. ಆದರೆ ಜಾನ್ಸನ್ ಕೈಯಿಂದ ಬಂಗಾರ ಕಸಿದುಕೊಂಡಿದ್ದರಿಂದ ಅಂದಿನ ಓಟವನ್ನು ಬೆನ್ ಬೆನ್ನಲ್ಲಿ ಮುಗಿಸಿದ್ದ ಕಾರ್ಲ್ ಲೆವಿಸ್, ಗ್ರೇಟ್ ಬ್ರಿಟನ್ ನ ಲಿನ್ಫೋರ್ಡ್ ಕ್ರಿಸ್ಟಿ, ಅಮೆರಿಕಾದ ಕ್ಯಾಲ್ವಿನ್ ಸ್ಮಿತ್ ಅವರಿಗೆ ಕ್ರಮವಾಗಿ ಬಂಗಾರ, ಬೆಳ್ಳಿ, ಕಂಚಿನ ಪದಕ ನೀಡಲಾಗಿತ್ತು.
ಎಕಮ್ರಾ ಸ್ಪೋರ್ಟ್ಸ್ ಲಿಟರರಿ ಫೆಸ್ಟಿವಲ್ ಆತಿಥ್ಯವನ್ನು ಈ ಬಾರಿ ಭಾರತ ವಹಿಸಿಕೊಂಡಿದೆ. ಒಡಿಶಾದ ಭುವನೇಶ್ವರದಲ್ಲಿ ನವೆಂಬರ್ 2ರಿಂದ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಜಾನ್ಸನ್ 1988ರ ಒಲಿಂಪಿಕ್ಸ್ ಬಗ್ಗೆ ಇನ್ನೊಂದಿಷ್ಟು ಮಾತುಗಳನ್ನಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications