ಉಡುಪಿ, ಮೇ 3: ಅಂತಾರಾಷ್ಟ್ರೀಯ ಯೂತ್ ಯೋಗಿಕ್ ಸೈನ್ಸ್ ಫೆಡರೇಷನ್ ಮತ್ತು ವರ್ಷಿಣಿ ಯೋಗ ಎಜುಕೇಷನ್ ಸಂಸ್ಥೆಗಳು, ಗವರ್ನಮೆಂಟ್ ಆಫ್ ಆಯುಷ್ ಆಂಡ್ ಯೂತ್ ಸ್ಪೋರ್ಟ್ಸ್ ಸರ್ವಿಸಸ್ ಸಹ ಭಾಗಿತ್ವದೊಂದಿಗೆ ರಾಷ್ಟ್ರೀಯ ಮಟ್ಟದ ಎಂಟನೇ ಯೋಗಾಸನ ಸ್ಪರ್ಧೆ ಆಯೋಜಿಸಿಸಲಾಗಿತ್ತು.
ಏಪ್ರಿಲ್ 15, 2022ರಂದು ಗೋವಾದಲ್ಲಿ ಜರುಗಿದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 8ರಿಂದ 10 ವರ್ಷದೊಳಗಿನ ವಯೋಮಾನ ವಿಭಾಗದಲ್ಲಿ ಭಾಗವಹಿಸಿದ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 5ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶಿವಾನಿ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಳು.
ಈಕೆ ಬೇಳಂಜೆ ಶಿವಾನಂದ ಶೆಟ್ಟಿ ಹಾಗೂ ಹೆಬ್ರಿ ಸುಜಾತ ಶೆಟ್ಟಿ ದಂಪತಿಗಳ ಸುಪುತ್ರಿಯಾಗಿದ್ದು, ಯೋಗ ಗುರು ಕೆ. ನರೇಂದ್ರ ಕಾಮತ್ ಕಾರ್ಕಳ ಇವರ ಶಿಷ್ಯೆಯಾಗಿದ್ದಳು.

ಈ ಮೊದಲು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿಯೂ ಹಾಗೂ ಇತ್ತೀಚೆಗೆ ನಡೆದ ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನಿಯಾಗಿ ಪುರಸ್ಕೃತಳಾಗಿದ್ದಾಳೆ.
ಶಿವಾನಿ ಶೆಟ್ಟಿಯ ಈ ಸಾಧನೆಯನ್ನು ಮೆಚ್ಚಿ ಹಲವಾರು ಸಂಘ-ಸಂಸ್ಥೆಗಳು, ಹಿರಿಯ ವ್ಯಕ್ತಿಗಳು ಅಭಿನಂದಿಸಿ ಉಜ್ವಲ ಭವಿಷ್ಯಕ್ಕಾಗಿ ಆರೈಸಿದ್ದಾರೆ. ಅಲ್ಲದೇ ಈಕೆ ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ 10 ವರ್ಷದೊಳಗಿನ ವಯೋಮಿತಿಯಲ್ಲಿ ಶಿವಾನಿ ಶೆಟ್ಟಿ ಆಯ್ಕೆಯಾಗಿದ್ದಾಳೆ.

ಶಿವಾನಿ ಶೆಟ್ಟಿ ಹೆಬ್ರಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆರ್ಥಿಕ ನೆರವು ನೀಡುವುದಾಗಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ತಿಳಿಸಿದ್ದಾರೆ.