
ಚಾಂಗ್‍ವೊನ್, ಸೆಪ್ಟೆಂಬರ್ 6: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನ ಶೂಟಿಂಗ್ ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದ ಕಿರಿಯ ಶೂಟರ್ ಸೌರಭ್ ಚೌಧರಿ ಅವರ ಬಂಗಾರದ ಬೇಟೆ, ಶೂಟಿಂಗ್ ವಿಶ್ವ ಚಾಂಪಿಯನ್ ಶಿಪ್ ನಲ್ಲೂ ಮುಂದುವರೆದಿದೆ.
ಗುರುವಾರ ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ನಡೆದ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ (ಐಎಸ್ಎಸ್ಎಫ್) ವಿಶ್ವ ಚಾಂಪಿಯನ್ ಶಿಪ್ ನ 10 ಮೀ. ಏರ್ ಪಿಸ್ತೂಲ್ ಜೂನಿಯರ್ ಸ್ಪರ್ಧೇಯಲ್ಲಿ ಸೌರಭ್ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.
16ರ ಹರೆಯದ ಚೌಧರಿ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದರು. ಮತ್ತೆ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಬಂಗಾರದೊಂದಿಗೆ ಗೆದ್ದರು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಚೌಧರಿ ಗಳಿಸಿದ 245.5 ಪಾಯಿಂಟ್ ಕಿರಿಯರ ವಿಭಾಗದಲ್ಲಿ ವಿಶ್ವ ದಾಖಲೆ ಬರೆದಿದೆ.
ಇದೇ ವಿಭಾಗದ ಬೆಳ್ಳಿ ಪದಕ ಕೊರಿಯಾದ ಹೋಜಿನ್ ಲಿಮ್ ಪಾಲಾದರೆ, ಭಾರತದ ಮತ್ತೊಬ್ಬ ಶೂಟರ್ ಅರ್ಜುನ್ ಸಿಂಗ್ ಚೀಮಾ ಅವರು 218 ಪಾಯಿಂಟ್ ಗಳೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡರು.