Sourav Ganguly Birthday: ಮಾಜಿ ನಾಯಕ ಸೌರವ್ ಗಂಗೂಲಿ 51ನೇ ಜನ್ಮದಿನ; ದಾದಾನ 5 ಪ್ರಮುಖ ವಿವಾದಗಳು
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಂದು (ಜುಲೈ 8) 51ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೌರವ್ ಗಂಗೂಲಿಯನ್ನು ಕ್ರಿಕೆಟಿಗರು ಮತ್ತು ಅಭಿಮಾನಿಗಳು "ದಾದಾ' ಎಂದು ಕರೆಯುತ್ತಾರೆ.
1972, ಜುಲೈ 8ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದ ಸೌರವ್ ಗಂಗೂಲಿ, ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ, ಅನಂತರ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು. ಈ ಎಡಗೈ ಬ್ಯಾಟರ್ ಮುಂದೊಂದು ದಿನ ತಂಡದ ನಾಯಕನಾಗಿ, ಬಿಸಿಸಿಐ ಅಧ್ಯಕ್ಷರೂ ಕೂಡ ಆಗಿದ್ದರು.

ಸೌರವ್ ಗಂಗೂಲಿ ಭಾರತ ತಂಡದ ಪರ ಉತ್ತಮ ರನ್ ಗಳಿಸಿದ್ದಾರೆ ಮತ್ತು ನಾಯಕನಾಗಿ ಭಾರತ ತಂಡವನ್ನು ಉತ್ತುಂಗಕ್ಕೆ ಏರಿಸಿದವರಲ್ಲಿ ಇವರೂ ಒಬ್ಬರು. ಎದುರಾಳಿ ತಂಡಗಳ ಸ್ಲೆಡ್ಜಿಂಗ್‌ಗೆ ಮೈದಾನದಲ್ಲಿ ದಿಟ್ಟ ಉತ್ತರ ನೀಡಲು ಪ್ರಾರಂಭಿಸಿದ್ದೇ ಸೌರವ್ ಗಂಗೂಲಿ ನಾಯಕತ್ವದಲ್ಲಿ.
ಸೌರವ್ ಗಂಗೂಲಿ ಅವರ ಚಾಣಾಕ್ಷ ನಾಯಕತ್ವದಲ್ಲಿ ಭಾರತ ತಂಡ ಅನೇಕ ದೊಡ್ಡ ಸರಣಿಗಳನ್ನು ಗೆದ್ದಿದೆ. ಆದರೂ, ಅವರು ತಮ್ಮ ವೃತ್ತಿಜೀವನದಲ್ಲಿ ಕೆಲವು ವಿವಾದಗಳನ್ನು ಮೈಮೇಲೆಳೆದುಕೊಂಡರು. ಗಂಗೂಲಿ ಭಾಗಿಯಾದ 5 ಪ್ರಮುಖ ವಿವಾದಗಳ ಕುರಿತ ಮಾಹಿತಿ ಇಲ್ಲಿದೆ.
1) ಸ್ಟೀವ್ ವಾ ಟಾಸ್‌ಗಾಗಿ ಕಾಯುವಂತೆ ಮಾಡಿದ್ದ ಸೌರವ್ ಗಂಗೂಲಿ
ಭಾರತ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ಅವರು ದಬ್ಬಾಳಿಕೆಗೆ ಒಳಗಾಗದ ಅತ್ಯಂತ ಧೈರ್ಯ ವ್ಯಕ್ತಿತ್ವವನ್ನು ಹೊಂದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಎದುರಾಳಿ ನಾಯಕ ಸ್ಟೀವ್ ವಾ ಟಾಸ್‌ಗಾಗಿ ಕಾಯುವಂತೆ ಮಾಡಿದರು. ಸೌರವ್ ಗಂಗೂಲಿ ಆಸೀಸ್ ತಂಡದ ವಿರುದ್ಧ ಮಾನಸಿಕ ಪ್ರತೀಕಾರಕ್ಕಾಗಿ ಉದ್ದೇಶಪೂರ್ವಕವಾಗಿ ಹಾಗೆ ಮಾಡಿದ್ದಾರೆ ಎಂದು ಸ್ಟೀವ್ ವಾ ಈಗಲೂ ಭಾವಿಸಿದ್ದಾರೆ.

2) ಅಂಗಿ ಬಿಚ್ಚಿ ತೂರಾಡಿ ಸಂಭ್ರಮ
2002ರ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಲಾರ್ಡ್ಸ್ ಮೈದಾನದಲ್ಲಿ ಆತಿಥೇಯ ತಂಡದ ವಿರುದ್ಧ ಐತಿಹಾಸಿಕ ಸರಣಿ ಗೆಲುವು ದಾಖಲಿಸಿತು. ಆಗ ಭಾರತದ ನಾಯಕ ಸೌರವ್ ಗಂಗೂಲಿ ಸಂಪ್ರದಾಯಗಳನ್ನು ಮುರಿದರು. ಐಕಾನಿಕ್ ಕ್ರಿಕೆಟ್ ಮೈದಾನದ ಐತಿಹಾಸಿಕ ಬಾಲ್ಕನಿಯಲ್ಲಿ ಭಾವೋದ್ರೇಕದಿಂದ ತಮ್ಮ ಅಂಗಿಯನ್ನು ಬಿಚ್ಚಿ ಗಾಳಿಯಲ್ಲಿ ಬೀಸಿದ್ದರು ಮತ್ತು ತಮ್ಮ ತಂಡದ ಸದಸ್ಯರಿಗೂ ಹೇಳಿದ್ದರು. ಇದನ್ನು ಎಂಸಿಸಿ ಸದಸ್ಯರು ವ್ಯಾಪಕವಾಗಿ ಟೀಕಿಸಿದ್ದರು.
3) ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ಜೊತೆ ಜಗಳ
2005-06ರ ಸಮಯದಲ್ಲಿ ಆಗಿನ ಟೀಂ ಇಂಡಿಯಾ ಕೋಚ್ ಗ್ರೆಗ್ ಚಾಪೆಲ್ ಅವರೊಂದಿಗಿನ ಸೌರವ್ ಗಂಗೂಲಿ ಜಗಳ ಎಲ್ಲರಿಗೂ ತಿಳಿದಿರುವ ಸಂಗತಿ. ಬಳಿಕ ಸೌರವ್ ಗಂಗೂಲಿ ನಾಯಕತ್ವದಿಂದ ಕೆಳಗಿಳಿಯಬೇಕಾಯಿತು. ನಂತರ ತಂಡದಲ್ಲಿ ಸಾಮಾನ್ಯ ಸ್ಥಾನ ಪಡೆಯಬೇಕಾಯಿತು. ರಾಹುಲ್ ದ್ರಾವಿಡ್ ನಾಯಕನಾದರು.
4) ಐಪಿಎಲ್‌ನಲ್ಲಿ ಶೇನ್ ವಾರ್ನ್ ಜೊತೆ ಜಟಾಪಟಿ
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಆಸ್ಟ್ರೇಲಿಯಾದ ಸ್ಪಿನ್ ಶ್ರೇಷ್ಠ ಶೇನ್ ವಾರ್ನ್ ಕ್ಯಾಚ್‌ನ ಸ್ಪಷ್ಟತೆಯ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಜಗಳವಾಡಿಕೊಂಡಿದ್ದರು. ಮೂರನೇ ಅಂಪೈರ್ ಕ್ಯಾಚ್ ಅನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಸೌರವ್ ಗಂಗೂಲಿ ಮನವಿ ಮಾಡಿದ್ದರು. ಇದು ಶೇನ್ ವಾರ್ನ್ ಅವರನ್ನು ಕೆರಳಿಸಿತು. ಅಂಪೈರ್‌ಗಳು ಮತ್ತು ಸಹ ಆಟಗಾರರು ಅವರನ್ನು ಸಮಾಧಾನಪಡಿಸುವ ಮೊದಲು ಇಬ್ಬರೂ ಶ್ರೇಷ್ಠ ಕ್ರಿಕೆಟಿಗರು ವಾಗ್ವಾದ ನಡೆಸಿದರು.
5) ಬಿಸಿಸಿಐ ಅಧ್ಯಕ್ಷರಾಗಿದ್ದಾಗ ವಿರಾಟ್ ಕೊಹ್ಲಿ ಜೊತೆ ಜಗಳ
ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದಾಗ, ಭಾರತ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಯೊಂದಿಗೆ ಮನಸ್ತಾಪ ಮಾಡಿಕೊಂಡಿದ್ದರು. ಇದು ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಅವರ ನಡುವೆ ಬಿರುಕು ಇರುವುದು ಜಗಜ್ಜಾಹೀರಾಯಿತು. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವಂತಾಯಿತು. ನಂತರ ಐಪಿಎಲ್ 2023ರ ಸಮಯದಲ್ಲಿ ಗಂಗೂಲಿ ಮತ್ತು ಕೊಹ್ಲಿ ಕೈಕುಲಕಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications