ಸೋಮವಾರ, ಜನವರಿ 22ರಂದು ಉತ್ತರಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ತಂಡದ ಕ್ರಿಕೆಟಿಗ ಕೇಶವ್ ಮಹಾರಾಜ್ ಅವರು ಶುಭ ಹಾರೈಸಿದ್ದಾರೆ.
ಹಿಂದೂ ಧರ್ಮದ ಮೇಲಿನ ಭಕ್ತಿಗೆ ಹೆಸರುವಾಸಿಯಾದ ಆಲ್‌ರೌಂಡರ್ ಕ್ರಿಕೆಟಿಗ ಕೇಶವ್ ಮಹಾರಾಜ್ ಅವರು ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ದೇವಾಲಯಗಳಿಗೂ ಭೇಟಿ ನೀಡಿದ್ದರು.
ರಾಮಮಂದಿರ ಲೋಕಾರ್ಪಣೆ ಸಮಾರಂಭವು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಭಾಗವಹಿಸುವಿಕೆಯೊಂದಿಗೆ ಅದ್ಧೂರಿ ಕಾರ್ಯಕ್ರಮವಾಗುವ ನಿರೀಕ್ಷೆಯಿದೆ.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅತ್ಯಂತ ವೈಭವೋಪೇತವಾಗಿ ನಡೆಸಲು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಯೋಜನೆ ರೂಪಿಸಿದ್ದು, ಭಾರತದ ವಿವಿಧ ಕ್ಷೇತ್ರಗಳಲ್ಲಿನ ಗಣ್ಯ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದೆ.
ಭಾರತೀಯ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ರವಿಚಂದ್ರನ್ ಅಶ್ವಿನ್ ಮತ್ತು ಇತರ ಕ್ರೀಡಾ ವ್ಯಕ್ತಿಗಳು ಈ ಶುಭ ಸಮಾರಂಭದಲ್ಲಿ ಭಾಗವಹಿಸಲು ಔಪಚಾರಿಕ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಎಡಗೈ ಸ್ಪಿನ್ ಆಲ್‌ರೌಂಡರ್ ಆಗಿರುವ ಕೇಶವ್ ಮಹಾರಾಜ್ ಹುಟ್ಟಿ ಬೆಳೆದಿದ್ದೆಲ್ಲಾ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ. ಆದರೆ, ಅವರ ತಾತ ಉತ್ತರಪ್ರದೇಶದ ಸುಲ್ತಾನ್‌ಪುರ್ ಗ್ರಾಮದವರಾಗಿದ್ದಾರೆ.
2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ವೇಳೆ ಕೇಶವ್ ಮಹಾರಾಜ್ ಭಾರತದ ವಿವಿಧ ಭಾಗಗಳಲ್ಲಿನ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಿದ್ದರು. ಇತ್ತೀಚೆಗೆ ಅವರು ಕೇರಳದ ತಿರುವನಂತಪುರದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು.
ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಭಾರತ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದ ಸಂದರ್ಭದಲ್ಲಿ ಕೇಶವ್ ಮಹಾರಾಜ್, ಆದಿಪುರುಷ್ ಸಿನಿಮಾದ "ರಾಮ್ ಸಿಯಾ ರಾಮ್' ಹಾಡನ್ನು ಹಾಕಿಸಿಕೊಂಡು ಭಾರೀ ಸುದ್ದಿ ಮಾಡಿದ್ದರು.
ಕ್ರೀಸ್‌ಗೆ ಬಂದ ವೇಳೆ ಕೇಶವ್ ಮಹಾರಾಜ್‌ಗೆ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಧನಸ್ಸು ಹಿಡಿದ ಭಂಗಿ ಮತ್ತು ಕೈ ಮುಗಿದು ಸ್ವಾಗತ ಕೋರಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.