
ನವದೆಹಲಿ: ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮನ್ನಣೆ ದೊರೆತಿದೆ. ಕ್ರೀಡಾ ಸಚಿವಾಲಯವು ಗುರುವಾರ (ಡಿಸೆಂಬರ್ 17) ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯೆಂದು ಔಪಚಾರಿಕವಾಗಿ ಘೋಷಿಸಿದೆ. ಇನ್ಮುಂದೆ ಖೇಲೋ ಇಂಡಿಯಾದಂತಹ ಕ್ರೀಡಾಕೂಟಗಳಲ್ಲಿ ಯೋಗಾಸನ ಕೂಡ ಸ್ಪರ್ಧಾತ್ಮಕ ಕ್ರೀಡೆಗಳ ಪಟ್ಟಿಗೆ ಸೇರಲಿದೆ.
ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತು ಆಯುಷ್ (ಆಯುರ್ವೇದ ಯೋಗ ಆ್ಯಂಡ್ ನ್ಯಾಚುರೋಪತಿ ಯುನಾನಿ ಸಿದ್ದ ಹೋಮಿಯೋಪತಿ) ಸಚಿವ ಶ್ರೀಪಾದ್ ಎಸ್ಸೋ ನಾಯ್ಕ್ ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಭಡ್ತಿ ನೀಡಿದ್ದಾರೆ.
ಯೋಗವನ್ನು ಉತ್ತೇಜಿಸಲು, ಅದರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಲು ಈ ಕ್ರಮವನ್ನು ಮಾಡಲಾಗಿದೆ. 'ಕಳೆದ ಹಲವಾರು ವರ್ಷಗಳಿಂದಲೂ ಯೋಗಾಸನ ಸ್ಪರ್ಧಾತ್ಮಕ ಕ್ರೀಡೆಯಾಗಿದೆ. ಆದರೆ ಇದನ್ನು ಸರ್ಕಾರ ಅಧಿಕೃತವಾಗಿ ಘೋಷಿಸಬೇಕಾಗಿತ್ತು,' ಎಂದು ಕಿರಣ್ ರಿಜಿಜು ಹೇಳಿದ್ದಾರೆ.
'ಇವತ್ತು ಯೋಗಾಸನ ಕ್ಷೇತ್ರಕ್ಕೆ ಬಹುದೊಡ್ಡ ದಿನ. ನಾವು ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯೆಂದು ಘೋಷಿಸುತ್ತಿದ್ದೇವೆ. ಇದರಿಂದ ಯೋಗಾಸನ ಬಹಳ ದೊಡ್ಡ ಮಟ್ಟಕ್ಕೆ ಬೆಳೆಯಲಿದೆ ಎನ್ನುವ ನಂಬಿಕೆ ನನಗಿದೆ,' ಎಂದು ಕಿರಣ್ ಪ್ರತಿಕ್ರಿಯಿಸಿದ್ದಾರೆ.