ಶ್ರೀಲಂಕಾದ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಮಾಜಿ ನಾಯಕ ಧಮ್ಮಿಕಾ ನಿರೋಶನ ಅವರನ್ನು ಜುಲೈ 16ರ ಮಂಗಳವಾರ ರಾತ್ರಿ ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವ ದುರಂತ ಸುದ್ದಿಯೊಂದು ಹೊರಬಿದ್ದಿದೆ.
ಅಂಬಲಂಗೋಡದಲ್ಲಿರುವ ಮಾಜಿ ಕ್ರಿಕೆಟಿಗನ ಕಂದ ಮಾವದ ನಿವಾಸದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹತ್ಯೆ ನಡೆಯುವ ವೇಳೆ ಧಮ್ಮಿಕಾ ನಿರೋಶನ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿದ್ದರು ಎಂದು ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಧಮ್ಮಿಕಾ ನಿರೋಶನ ಅವರನ್ನು ಹತ್ಯೆ ಮಾಡಿರುವ ವ್ಯಕ್ತಿ 12-ಬೋರ್ ಬಂದೂಕನ್ನು ಬಳಸಿದ್ದಾನೆ ಎಂದು ವರದಿಯಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.
ಅಂಬಲಂಗೋಡದಲ್ಲಿ ಶ್ರೀಲಂಕಾದ ಅಂಡರ್-19 ಮಾಜಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬೇಗ ಹೋದೆ ಸಹೋದರ. ಯಾವುದೇ ವೃತ್ತಿಯಲ್ಲಿ ಶಿಸ್ತು ನಂಬರ್ 1 ಆಗಿರಬೇಕು ಎಂದು ಅಮಿಲಾ ಕಲುಗಳಗೆ ಟ್ವೀಟ್ ಮಾಡಿದ್ದಾರೆ.
ಧಮ್ಮಿಕಾ ನಿರೋಶನ ಶ್ರೀಲಂಕಾದ ಯುವ ತಂಡದಿಂದ ಹೊರಬಂದ ಅತ್ಯುತ್ತಮ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಕಂಡುಬಂದರು. 19ರೊಳಗಿನ ವಯೋಮಾನದ ಕ್ರಿಕೆಟ್‌ನಲ್ಲಿ ಫರ್ವೇಜ್ ಮಹರೂಫ್, ಏಂಜೆಲೊ ಮ್ಯಾಥ್ಯೂಸ್, ಉಪುಲ್ ತರಂಗ ಮುಂತಾದವರನ್ನು ಧಮ್ಮಿಕಾ ನಿರೋಶನ ಮುನ್ನಡೆಸಿದ್ದಾರೆ. ಅವರು ತಮ್ಮ 20ನೇ ವಯಸ್ಸಿನಲ್ಲಿ ಕ್ರೀಡೆಯನ್ನು ತೊರೆದರು.
ಧಮ್ಮಿಕಾ ನಿರೋಶನ ಅವರು 2001 ಮತ್ತು 2004ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್‌ಗಾಗಿ ಒಟ್ಟು 12 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ.
ಉತ್ತಮ ಆಲ್‌ರೌಂಡರ್ ಆಗಿರುವ ಧಮ್ಮಿಕಾ ನಿರೋಶನ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಅವರು ತಮ್ಮ ಸಕ್ರಿಯ ವೃತ್ತಿಜೀವನದಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದರು ಮತ್ತು 19 ವಿಕೆಟ್‌ಗಳನ್ನು ಪಡೆದರು.
ಧಮ್ಮಿಕಾ ನಿರೋಶನ 2000ರಲ್ಲಿ ಶ್ರೀಲಂಕಾ ಕ್ರಿಕೆಟ್‌ನ ಅಂಡರ್-19 ತಂಡಕ್ಕೆ ಪದಾರ್ಪಣೆ ಮಾಡಿದರು ಮತ್ತು ಎರಡು ವರ್ಷಗಳ ಕಾಲ ಬೆರಳೆಣಿಕೆಯ ಅಂಡರ್-19 ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡರು.