
ನವದೆಹಲಿ, ನವೆಂಬರ್ 20: ಕೆಲ ದಿನಗಳ ಹಿಂದಷ್ಟೇ ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿಒಪಿಎಸ್) ನಿಂದ ಕೈಬಿಟ್ಟಿದ್ದರಿಂದ ಆಘಾತವನ್ನು ಅನುಭವಿಸಿದ್ದ ಭಾರತದ ಸ್ಟಾರ್ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಮತ್ತು ಸಾಕ್ಷಿ ಮಲ್ಲಿಕ್‌ಗೆ ಮತ್ತೊಂದು ಗುದ್ದು ಬಿದ್ದಿದೆ. ಸುಶೀಲ್, ಸಾಕ್ಷಿ ಇಬ್ಬರನ್ನೂ ಭಾರತದ ರಸ್ಲಿಂಗ್ ಫೆಡರೇಶನ್‌ನ ಟಾಪ್ ಪೇ ಬ್ರಾಕೆಟ್ (ಸಂಭಾವನೆ) ಪಟ್ಟಿಯಿಂದ ಕೆಳಗಿಳಿಸಲಾಗಿದೆ.
ಇತ್ತೀಚಿನ ವರದಿಯ ಪ್ರಕಾರ ಸುಶೀಲ್ ಮತ್ತು ಸಾಕ್ಷಿ ಅವರನ್ನು 'ಬಿ' ಗ್ರೇಡ್ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾಗಿ ಇಬ್ಬರೂ ಇನ್ಮುಂದೆ 20 ಲಕ್ಷ ರೂ. ಸಂಭಾವನೆಯನ್ನಷ್ಟೇ ಪಡೆಯಲಿದ್ದಾರೆ. ಟಾಪ್ ಪೇ ಬ್ರಾಕೆಟ್ ನಲ್ಲಿನ ಎಲೈಟ್ ಕುಸ್ತಿಪಟುಗಳು, ಅಥ್ಲೀಟ್‌ಗಳು 'ಎ' ಗ್ರೇಡ್ ನಲ್ಲಿ 30 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.
ಕುಸ್ತಿ ಪಟುಗಳ ಇತ್ತೀಚಿನ ಸಾಧನೆ ಮತ್ತು ಭವಿಷ್ಯದಲ್ಲಿನ ಸಾಧನೆಯನ್ನು ಗಮನದಲ್ಲಿಟ್ಟು ಗ್ರೇಡ್ ವರ್ಗೀಕರಣ ಮಾಡಲಾಗಿದೆ. ಆದ್ದದರಿಂದ ರಸ್ಲಿಂಗ್ ಫೆಡರೇಷನ್ ಕಾಂಟ್ರ್ಯಾಕ್ಟ್ಸ್‌ನಲ್ಲಿ ಸುಶೀಲ್, ಸಾಕ್ಷಿಗೆ 'ಬಿ' ಗ್ರೇಡ್ ನೀಡಲಾಗಿದೆ. ಫೋಗಟ್ ಕುಟುಂಬದ ಸಹೋದರಿಯರಾದ ಗೀತಾ ಮತ್ತು ಬಬಿತಾ ಅವರನ್ನೂ ಸೆಂಟ್ರಲ್ ಕಾಂಟ್ರ್ಯಾಕ್ಟ್ಸ್‌ನಿಂದ ಕೈಬಿಡಲಾಗಿದೆ.
ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ್ದರೆ, 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದಿದ್ದರು. ಅತ್ತ ಸಾಕ್ಷಿ ಕೂಡ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸುವ ಮೂಲಕ ಒಲಿಂಪಿಕ್ಸ್ ನ ರಸ್ಲಿಂಗ್ ನಲ್ಲಿ ಪದಕ ಜಯಿಸಿದ ಮೊಲದ ಭಾರತೀಯೆ ಹಿರಿಮೆಗೆ ಪಾತ್ರರಾಗಿದ್ದರು.