T20 World Cup 2024: ಕೆನಡಾ ಪರ ನವನೀತ್-ಕಿರ್ಟನ್ ಭರ್ಜರಿ ಜೊತೆಯಾಟ; ಯುಎಸ್‌ಎಗೆ ಸವಾಲಿನ ಗುರಿ
ಜೂನ್ 2 ಭಾನುವಾರ, ಅಮೆರಿಕಾದ ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ 2024ರ ಟಿ 20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಯುಎಸ್ಎ ತಂಡದ ಎದುರು ಕೆನಡಾ ಸವಾಲಿನ ಗುರಿ ಕಲೆಹಾಕಿದೆ.
ನವನೀತ್ ಧಲಿವಾಲ್ ಮತ್ತು ನಿಕೋಲಸ್ ಕಿರ್ಟನ್ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದರು. ನಿಗದಿತ 20 ಓವರ್‌ಗಳಲ್ಲಿ ಕೆನಡಾ 4 ವಿಕೆಟ್ ಕಳೆದುಕೊಂಡು 194 ರನ್‌ಗಳನ್ನು ಕಲೆಹಾಕಿದೆ. ಹೀಗಾಗಿ ಯುಎಸ್‌ಎ ಗೆಲ್ಲಲು 195 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಕೆನಡಾ ಪರ ಆರನ್ ಜಾನ್ಸನ್ ಮತ್ತು ನವನೀತ್ ಧಲಿವಾಲ್ ಅವರು ಇನ್ನಿಂಗ್ಸ್ ಆರಂಭಿಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 43 ರನ್‌ಗಳ ಜೊತೆಯಾಟವಾಡಿದರು.
5 ಆರ್ಕಷಕ ಬೌಂಡರಿಗಳನ್ನು ಹೊಡೆದು 23 ರನ್‌ಗಳಿಸಿದ ಆರನ್ ಜಾನ್ಸನ್ ಅವರು ಹರ್ಮೀತ್ ಸಿಂಗ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಪರ್ಗತ್ ಸಿಂಗ್ (5) ದುರದೃಷ್ಟಕರ ರನೌಟ್‌ಗೆ ಬಲಿಯಾದರು.
ನಂತರ ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ನಿಕೋಲಸ್ ಕಿರ್ಟನ್ ಮತ್ತು ನವನೀತ್ ಧಲಿವಾಲ್ ಅವರು ಕೆನಡಾ ಪರ ಅದ್ಭುತ ಇನ್ನಿಂಗ್ಸ್ ಆಡಿದರು. ಈ ವೇಳೆ ನವನೀತ್ ಧಲಿವಾಲ್ ಅಬ್ಬರದ ಅರ್ಧಶತಕ ಬಾರಿಸಿ ಮಿಂಚಿದರು.

44 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ 61 ರನ್ ಕಲೆ ಹಾಕಿದ ನವನೀತ್ ಧಲಿವಾಲ್ ಅವರು, ಸಿಜೆ ಆಂಡರ್ಸನ್ ಬೌಲಿಂಗ್‌ನಲ್ಲಿ ಔಟ್ ಆದರು. ಇತ್ತ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ನಿಕೋಲಸ್ ಕಿರ್ಟನ್ ಅರ್ಧಶತಕ ಹೊಡೆದು ಸಂಭ್ರಮಿಸಿದರು.
ನಿಕೋಲಸ್ ಕಿರ್ಟನ್ ಕೇವಲ 31 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 51 ರನ್ ಹೊಡೆದು ಅಲಿ ಖಾನ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ದಿಲ್‌ಪ್ರೀತ್ ಸಿಂಗ್ (11) ಕೂಡ ರನೌಟ್ ಆದರು.
ಕೊನೆಯಲ್ಲಿ ಬೀರುಸಿನ ಬ್ಯಾಟಿಂಗ್ ಮಾಡಿದ ಶ್ರೇಯಸ್ ಮೊವ್ವಾ ಅಜೇಯ 32 ರನ್ ಹೊಡೆದರೆ, ದಿಲ್ಲನ್ ಹೇಲಿಗರ್ 1 ರನ್ ಗಳಿಸಿ ಕೆನಡಾ ತಂಡದ ಮೊತ್ತ ಹೆಚ್ಚಿಸಿದರು. ಯುಎಸ್‌ಎ ಪರ ಹರ್ಮೀತ್ ಸಿಂಗ್, ಸಿಜೆ ಆಂಡರ್ಸನ್ ಮತ್ತು ಅಲಿ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications