
ನವದೆಹಲಿ, ಜೂನ್ 3: ಭಾರತದ ಟೆಬಲ್ ಟೆನಿಸ್ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ಹೆಸರನ್ನು ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ) ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಎರಡನೇ ಬಾರಿಗೆ ಶಿಫಾರಸು ಮಾಡಿದೆ. ಕಳೆದ ವರ್ಷ ಮಣಿಕಾ ಇದೇ ಪ್ರಶಸ್ತಿ ಕಳೆದುಕೊಂಡಿದ್ದರು.
ಕಾಮನ್ವೆಲ್ತ್ ಗೇಮ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮಣಿಕಾ ಅವರದ್ದು. 2018ರ ಆವೃತ್ತಿಯಲ್ಲಿ ಮಣಿಕಾ ಈ ಸಾಧನೆ ತೋರಿದ್ದರು. ಇದೇ ವರ್ಷ ಮಣಿಕಾಗೆ 2 ಚಿನ್ನದ ಪದಕ ಸೇರಿ ಒಟ್ಟಿಗೆ 4 ಪದಕಗಳು ಲಭಿಸಿದ್ದವು.
2018ರ ವರ್ಷದಲ್ಲಿ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 24ರ ಹರೆಯದ ಬಾತ್ರಾ ಚೊಚ್ಚಲ ಬಾರಿಗೆ ಮಹಿಳಾ ಟಿಟಿ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರದ ಮೆರಗು ತಂದಿದ್ದರು. ಅದಾಗಿ 5 ತಿಂಗಳ ಬಳಿಕ ಸದ್ಯ 63ನೇ ವಿಶ್ವ ಶ್ರೇಯಾಂಕದಲ್ಲಿರುವ ಮಣಿಕಾ, ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಶರತ್ ಕಮಲ್ ಜೊತೆ ಸೇರಿ ಕಂಚಿನ ಪದಕ ಜಯಿಸಿದ್ದರು.
'ಆ ಗೌರವಕ್ಕೆ ಮಣಿಕಾ ಅರ್ಹಳು ಎಂದು ನಮಗನ್ನಿಸಿತು. ಇದಕ್ಕಾಗೇ ನಾವು ಎರಡನೇ ಬಾರಿ ಖೇಲ್ ರತ್ನಕ್ಕೆ ಅವಳ ಹೆಸರನ್ನು ಶಿಫಾರಸು ಮಾಡಿದ್ದೇವೆ,' ಎಂದು ಟಿಟಿಎಫ್‌ಐ ಮುಖ್ಯ ಕಾರ್ಯದರ್ಶಿ ಎಂಪಿ ಸಿಂಗ್ ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.