
ತಮಿಳುನಾಡು ಮೂಲದ ಯುವ ಟೇಬಲ್ ಟೆನಿಲ್ ಆಟಗಾರ ವಿಶ್ವ ದೀನದಯಾಳನ್ ರಸ್ತೆ ಅಪಘಾತದಲ್ಲಿ ಪ್ರಾಣಕಳೆದುಕೊಂಡಿದ್ದಾರೆ. ಸೋಮವಾರದಿಂದ ಆರಂಭವಾಗಲಿರುವ 83ನೇ ಸೀನಿಯರ್ ರಾಷ್ಟ್ರೀಯ ಮತ್ತು ಅಂತಾರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ದೀನದಯಾಳನ್ ಭಾಗವಹಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 18 ವರ್ಷದ ಭರವಸೆಯ ಕ್ರೀಡಾಪಟು ಮೃತಪಟ್ಟಿದ್ದಾರೆ ಎಂದು ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.
ಗುಹವಾಟಿಯಿಂದ ಶಿಲ್ಲಾಂಗ್ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತೀವ್ರ ಗಾಯಗೊಂಡಿದ್ದ ವಿಶ್ವ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಲಾಯಿತಾದರೂ ರಸ್ತೆ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇನ್ನು ವಿಶ್ವ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಹಪಾಠಿಗಳಾದ ರಮೇಶ್ ಸಂತೋಷ್ ಕುಮಾರ್, ಅಭಿನಾಶ್ ಪ್ರಸನ್ನಜಿ ಶ್ರೀನಿವಾಸನ್ ಮತ್ತು ಕಿಶೋರ್ ಕುಮಾರ್ ಎಂಬ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ
ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪದಕಗಳನ್ನು ಹೊಂದಿರುವ ಭರವಸೆಯ ಆಟಗಾರ ದಿವಂಗತ ವಿಶ್ವ, ಏಪ್ರಿಲ್ 27 ರಿಂದ ಆಸ್ಟ್ರಿಯಾದ ಲಿಂಜ್‌ನಲ್ಲಿ ನಡೆಯುವ WTT ಯುವಕರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದರು. ಅಣ್ಣಾನಗರದಲ್ಲಿರುವ ಕೃಷ್ಣಸ್ವಾಮಿ ಟಿಟಿ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದರು
ವಿಶ್ವ ಅವರ ನಿಧನಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದು ಸಂತಾಪ ಸೂಚಿಸಿದ್ದಾರೆ. "83 ನೇ ಸೀನಿಯರ್ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಶಿಲ್ಲಾಂಗ್‌ಗೆ ತೆರಳುತ್ತಿದ್ದಾಗ ರಿ ಭೋಯ್ ಜಿಲ್ಲೆಯಲ್ಲಿ ಅಪಘಾತದಲ್ಲಿ ತಮಿಳುನಾಡಿನ ಪ್ಯಾಡ್ಲರ್ ದೀನದಯಾಳನ್ ವಿಶ್ವ ನಿಧನರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ ಅವರ ಕುಟುಂಬಕ್ಕೆ ಈ ನೋವನ್ನು ಬರಿಸುವ ಶಕ್ತಿಯನ್ನು ನೀಡಲಿ" ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಮೃತ ವಿಶ್ವ ದೀನದಯಾಳನ್ ಅವರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಕ್ರೀಡಾ ಸಚಿವ ಅನುರಾಗ್ ಠಾಕೂರ್, ಮೇಘಾಲಯದ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ವಿಶ್ವ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.