ಜುಲೈ 25 ಗುರುವಾರ, ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ (ಜುಲೈ 26) ಯಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆರಂಭವಾಗುತ್ತಿದ್ದು, 117 ಸದಸ್ಯರ ಭಾರತದ ಆಥ್ಲೀಟ್ಸ್ ತಂಡ ಪ್ಯಾರಿಸ್‌ಗೆ ತೆರಳಿದೆ.
ಈ ಮೆಗಾ ಕ್ರೀಡಾಕೂಟದಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆಲ್ಲಲು ಪ್ರಯತ್ನಿಸಲಿದೆ. ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಾಡಬಹುದಾದ 10 ಸಾಧನೆಗಳ ಬಗ್ಗೆ ತಿಳಿಯಿರಿ.

1) ಭಾರತ ಒಲಿಂಪಿಕ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ಚಿನ್ನದ ಪದಕಗಳೊಂದಿಗೆ ಹಿಂತಿರುಗಿಲ್ಲ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಅವಕಾಶವಿದೆ.
2) ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ತಂದ ಭಾರತದ ಮೊದಲ ಅಥ್ಲೀಟ್ ಆಗುವ ಅವಕಾಶ ಪಡೆದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಇತ್ತೀಚೆಗೆ ಹಲವು ಯಶಸ್ಸನ್ನು ಸಾಧಿಸಿದ್ದಾರೆ.
ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅಮೋಘ ಪ್ರದರ್ಶನ ನೀಡುವ ಮೂಲಕ ಎರಡು ವೈಯಕ್ತಿಕ ಒಲಿಂಪಿಕ್ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಬಹುದು.
3) ಇಲ್ಲಿವರೆಗೂ ಒಲಿಂಪಿಕ್ಸ್ ಇತಿಹಾಸದಲ್ಲಿ ಯಾವುದೇ ಭಾರತದ ಮಹಿಳಾ ಕ್ರೀಡಾಪಟುಗಳು ಚಿನ್ನದ ಪದಕಗಳನ್ನು ಗೆದ್ದಿಲ್ಲ. ಒಲಿಂಪಿಕ್ಸ್‌ನಲ್ಲಿ ಮಹಿಳೆಯರು ಎರಡು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಮಾತ್ರ ಗೆದ್ದಿದ್ದಾರೆ. ಈಗ ಪ್ಯಾರಿಸ್‌ನಲ್ಲಿ ಈ ಸಾಧನೆ ಮಾಡಲು ಭಾರತದ ಮಹಿಳಾ ಅಥ್ಲೀಟ್ಸ್‌ಗೆ ದೊಡ್ಡ ಅವಕಾಶವಿದೆ.
4) ಬೀಜಿಂಗ್‌ನಲ್ಲಿ ನಡೆದ ಪುರುಷರ ಶೂಟಿಂಗ್‌ನಲ್ಲಿ ಭಾರತದ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಹೀಗಾಗಿ ಮಹಿಳಾ ಶೂಟರ್‌ಗಳಿಗೆ ಪ್ಯಾರಿಸ್‌ನಲ್ಲಿ ಮೊದಲ ಶೂಟಿಂಗ್ ಚಿನ್ನದ ಪದಕ ಗೆಲ್ಲುವ ಅವಕಾಶವಿದೆ.
ಸಿಫ್ಟ್ ಕೌರ್ ಸಮ್ರಾ ಮತ್ತು ಮನು ಭಾಕರ್ ಅವರಿಂದ ಭಾರತ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ಒಂದು ವೇಳೆ ಈ ಇಬ್ಬರಲ್ಲಿ ಒಬ್ಬರು ಚಿನ್ನದ ಗೆದ್ದರೂ ಭಾರತ ದಾಖಲೆ ಬರೆಯಲಿದೆ.
5) ಶೂಟಿಂಗ್‌ನಲ್ಲಿ ಭಾರತ ತನ್ನ ಮೊದಲ ಮಿಶ್ರ ತಂಡದಿಂದ ಪದಕದ ನಿರೀಕ್ಷೆ ಇಟ್ಟುಕೊಂಡಿದೆ. ಈ ಸಂದರ್ಭದಲ್ಲಿ 10 ಮೀಟರ್ ಏರ್ ರೈಫಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಇವೆಂಟ್‌ಗಳು ವಿಶೇಷವಾಗಿರುತ್ತವೆ. ಈ ಸ್ಪರ್ಧೆಯಲ್ಲಿಯೂ ಪದಕ ಗೆದ್ದು ಸಾಧನೆ ಮಾಡುವ ಅವಕಾಶವಿದೆ.
6) ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತ ಇದುವರೆಗೆ ಯಾವುದೇ ಚಿನ್ನ ಗೆದ್ದಿಲ್ಲ. ನಿಖತ್ ಜರೀನ್, ಲೊವ್ಲಿನಾ ಬೊರ್ಗೊಹೈನ್‌ಗೆ ಪ್ಯಾರಿಸ್‌ನಲ್ಲಿ ಈ ಸಾಧನೆ ಮಾಡುವ ಅವಕಾಶವಿದೆ.
ಎರಡೂ ಬಾಕ್ಸರ್‌ಗಳಿಗೆ ದೊಡ್ಡ ವೇದಿಕೆಯಲ್ಲಿ ಹೇಗೆ ಗೆಲ್ಲಬೇಕೆಂದು ತಿಳಿದಿದೆ. ಟೋಕಿಯೊದಲ್ಲಿ ಲೊವ್ಲಿನಾ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು.
7) ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಬ್ಯಾಡ್ಮಿಂಟನ್ ಚಿನ್ನದ ಪದಕ ಗೆಲ್ಲುವ ಅವಕಾಶವೂ ಸಿಕ್ಕಿದೆ. ಬ್ಯಾಡ್ಮಿಂಟನ್‌ನಲ್ಲಿ ಭಾರತವು ಪಿವಿ ಸಿಂಧು, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ, ಲಕ್ಷ್ಯ ಸೇನ್, ಎಚ್‌ಎಸ್ ಪ್ರಣಯ್ ಅವರಂತಹ ಸ್ಟಾರ್ ಆಟಗಾರರನ್ನು ಹೊಂದಿದೆ. ಪಿವಿ ಸಿಂಧು ಅವರು ಎರಡು ಬಾರಿ ವಿಶ್ವ ಚಾಂಪಿಯನ್ ಆಗದ್ದರು.
8) ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರಿಗೆ ಹ್ಯಾಟ್ರಿಕ್ ಪದಕ ಗಳಿಸುವ ಅವಕಾಶವಿದೆ. ಪಿವಿ ಸಿಂಧು ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದರು.
ಸತತ ಮೂರು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪ್ಯಾರಿಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಬಹುದಾಗಿದೆ.
9) ಭಾರತವು ಬಿಲ್ಲುಗಾರಿಕೆಯಲ್ಲಿ ಅನೇಕ ಪ್ರತಿಭಾವಂತ ಆಟಗಾರರನ್ನು ಹೊಂದಿದೆ. ಭಾರತವು ಪ್ಯಾರಿಸ್‌ನಲ್ಲಿ ತನ್ನ ಮೊದಲ ಬಿಲ್ಲುಗಾರಿಕೆ ಪದಕಕ್ಕಾಗಿ ತನ್ನ ಕಾಯುವಿಕೆಯನ್ನು ಕೊನೆಗೊಳಿಸಲು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎದುರು ನೋಡುತ್ತಿದೆ.
10) ಪ್ಯಾರಿಸ್ ಕ್ರೀಡಾಕೂಟವನ್ನ ತನ್ನ ಅತ್ಯುತ್ತಮ ಒಲಿಂಪಿಕ್ಸ್ ಮಾಡಲು ಭಾರತಕ್ಕೆ ಇದು ಉತ್ತಮ ಅವಕಾಶವಾಗಿದೆ. ಭಾರತದ ದೃಷ್ಟಿಕೋನದಿಂದ ಇದು ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ.
ಇದೇ ಮೊದಲ ಬಾರಿಗೆ ಭಾರತ ಒಲಿಂಪಿಕ್ಸ್‌ನಲ್ಲಿ ಪದಕಗಳ ವಿಷಯದಲ್ಲಿ ಎರಡಂಕಿ ಮುಟ್ಟಲು ಬಯಸಿದೆ. ಟೋಕಿಯೊ ಒಲಿಂಪಿಕ್ಸ್ ಪದಕ ಗೆಲ್ಲುವ ವಿಷಯದಲ್ಲಿ ಭಾರತಕ್ಕೆ ಅತ್ಯುತ್ತಮವಾಗಿದ್ದು, ಏಳು ಪದಕಗಳನ್ನು ಗೆದ್ದಿತ್ತು.