ಜುಲೈ 15 ಸೋಮವಾರ, ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಇದೇ ತಿಂಗಳ 26 ರಿಂದ ಆರಂಭವಾಗುತ್ತಿದೆ. ಈ ಮೆಗಾ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಆಥ್ಲೀಟ್‌ಗಳು ಕಾತುರದಿಂದ ಕಾಯುತ್ತಿದ್ದಾರೆ.
ಆದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಬರೋಬ್ಬರಿ 8 ಬಾರಿ ಚಿನ್ನದ ಪದಕಗಳನ್ನು ಗೆದ್ದ ಅಮೆರಿಕಾದ ಮಹಿಳಾ ಈಜುಪಟು ಜೆನ್ನಿ ಥಾಂಪ್ಸನ್ ಅವರು ಪ್ರಸ್ತುತ ವೈದ್ಯೆಯಾದ ಬಗ್ಗೆ ಇಲ್ಲಿದೆ ಸಂಪೂರ್ಣ ಕಥೆ.

ಜೆನ್ನಿ ಥಾಂಪ್ಸನ್ ಅಮೆರಿಕದ ಪ್ರಸಿದ್ಧ ಮಹಿಳಾ ಈಜುಪಟು. ಥಾಂಪ್ಸನ್ 26 ಫೆಬ್ರವರಿ 1973 ರಂದು ಯುಎಸ್ಎಯ ಮ್ಯಾಸಚೂಸೆಟ್ಸ್‌ನ ಡ್ಯಾನ್ವರ್ಸ್‌ನಲ್ಲಿ ಜನಿಸಿದರು. ಥಾಂಪ್ಸನ್ ತಮ್ಮ 12ನೇ ವಯಸ್ಸಿನಲ್ಲಿ ಡೋವರ್‌ನಲ್ಲಿರುವ ಸೀಕೋಸ್ಟ್ ಸ್ವಿಮ್ಮಿಂಗ್ ಅಸೋಸಿಯೇಷನ್‌ನಲ್ಲಿ ಮೈಕ್ ಪ್ಯಾರಾಟ್ಟೊಗಾಗಿ ಈಜಲು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಥಾಂಪ್ಸನ್ ಅವರಿಗೆ 13 ವರ್ಷ ತುಂಬುವ ಮೊದಲೇ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ವಿಶ್ವ ಶ್ರೇಯಾಂಕವನ್ನು ಸಾಧಿಸಿದರು. ಇದಾದ ಬಳಿಕ ತನ್ನ ಕುಟುಂಬದೊಂದಿಗೆ ಇಂಗ್ಲೆಂಡ್‌ನ ಡೋವರ್‌ಗೆ ತೆರಳಿದರು.
ತಮ್ಮ ಸಂಪೂರ್ಣ ಬಾಲ್ಯವನ್ನು ಥಾಂಪ್ಸನ್ ಅವರು ಡೋವರ್‌ನಲ್ಲಿ ಕಳೆದರು. ಅಲ್ಲಿನ ಕ್ಲಬ್‌ವೊಂದರಲ್ಲಿ ತರಬೇತಿ ಪಡೆದ ಥಾಂಪ್ಸನ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಯಶಸ್ವಿ ಕಾಲೇಜು ಈಜುಗಾರರಾದರು.
1992 ರಿಂದ 1995 ರವರೆಗೆ ಪ್ರತಿ ವರ್ಷ ರಾಷ್ಟ್ರೀಯ ಕಾಲೇಜಿಯೇಟ್ ಅಥ್ಲೆಟಿಕ್ ಅಸೋಸಿಯೇಷನ್ (NCAA) ಚಾಂಪಿಯನ್‌ಶಿಪ್‌ನಲ್ಲಿ 100-ಗಜಗಳ ಫ್ರೀಸ್ಟೈಲ್‌ನಲ್ಲಿ ಮೊದಲ ಸ್ಥಾನವನ್ನು ಪಡೆಯುವ ಮೂಲಕ, ರಾಷ್ಟ್ರೀಯ ಕಾಲೇಜಿಯೇಟ್ ಅಥ್ಲೆಟಿಕ್ಸ್ ಅಸೋಸಿಯೇಷನ್ (ಎನ್‌ಸಿಎಎ) ಇತಿಹಾಸದಲ್ಲಿ ನಾಲ್ಕು ಬಾರಿ 100-ಗಜಗಳ ಫ್ರೀಸ್ಟೈಲ್‌ನಲ್ಲಿ ಗೆದ್ದ ನಾಲ್ಕನೇ ಮಹಿಳೆ ಎಂಬ ಸಾಧನೆ ಮಾಡಿದರು.
ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಹೆಸರು ಮಾಡಿದ ಥಾಂಪ್ಸನ್ ಅವರು 14ನೇ ವಯಸ್ಸಿನಲ್ಲಿ ಪ್ಯಾನ್ ಅಮೇರಿಕನ್ ಗೇಮ್ಸ್ ಮೂಲಕ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಈ ಕ್ರೀಡಾಕೂಟದಲ್ಲಿ ಥಾಂಪ್ಸನ್ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಮತ್ತು 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕವನ್ನು ಗೆದ್ದು ದಾಖಲೆ ಬರೆದರು.
ಈ ವೇಳೆ ಡೋವರ್ ಹೈಸ್ಕೂಲ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾಗ ಜೆನ್ನಿ 1988 ಸಿಯೋಲ್ ಒಲಿಂಪಿಕ್ ತಂಡಕ್ಕೆ ಅರ್ಹತೆ ಪಡೆಯುವಲ್ಲಿ ಒಂದು ಸ್ಥಾನದಿಂದ ಅವಕಾಶ ಕಳೆದುಕೊಂಡರು . ಈ ನಿರಾಶೆಯನ್ನು ಪ್ರೇರಣೆಯಾಗಿ ತೆಗೆದುಕೊಂಡ ಥಾಂಪ್ಸನ್ 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ಗೆ ಆರ್ಹತೆ ಪಡೆಯುವಲ್ಲಿ ಯಶಸ್ವಿಯಾದರು.
ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡಿದ ಥಾಂಪ್ಸನ್ 100 ಮೀಟರ್ ಫ್ರೀಸ್ಟೈನ್‌ನಲ್ಲಿ ವಿಶ್ವ ದಾಖಲೆಯನ್ನು ಮುರಿದರು. ಇದಾದ ಬಳಿಕ ಸತತ ನಾಲ್ಕು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ (1992, 1996, 2000, 2004) ಚಿನ್ನದ ಪದಕಗಳನ್ನು ಮುತ್ತಿಕ್ಕಿದರು. ಇದರಲ್ಲಿ ಒಟ್ಟು 12 ಪದಕಗಳು ಸೇರಿವೆ.
ಜೆನ್ನಿ ಥಾಂಪ್ಸನ್ ಈಜು ಸ್ಪರ್ಧೆಯಲ್ಲಿ ಮೊದಲ ಬಾರಿಗೆ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದರು. ನಂತರ ಅಟ್ಲಾಂಟಾ-1996, ಸಿಡ್ನಿ, ಆಸ್ಟ್ರೇಲಿಯಾ- 2000, ಅಥೆನ್ಸ್, ಗ್ರೀಸ್- 2004ರ ಕ್ರೀಡಾಕೂಟಗಳಲ್ಲಿ ಸ್ಪರ್ಧೆ ಮಾಡಿದರು. ಈ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಥಾಂಪ್ಸನ್ ಒಟ್ಟು 12 ಪದಕಗಳನ್ನು (8 ಚಿನ್ನ, 3 ಬೆಳ್ಳಿ, 1 ಕಂಚು) ಗೆದ್ದಿದರು.
1991 ರಲ್ಲಿ ಡೋವರ್ ಹೈಸ್ಕೂಲ್‌ನಿಂದ ಪದವಿ ಪಡೆದ ಥಾಂಪ್ಸನ್ ಅವರು ವಿದ್ಯಾಭ್ಯಾಸಕ್ಕಾಗಿ ಅಥ್ಲೆಟಿಕ್ ವಿದ್ಯಾರ್ಥಿವೇತನದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಸ್ಟ್ಯಾನ್‌ಫೋರ್ಡ್‌ನಲ್ಲಿರುವಾಗ, ಜೆನ್ನಿ ಎನ್‌ಸಿಎಎ ಚಾಂಪಿಯನ್‌ಶಿಪ್‌ಗಳಲ್ಲಿ 19 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.
ಥಾಂಪ್ಸನ್ ಅವರ ತಂಡವು ಸತತವಾಗಿ ನಾಲ್ಕು ವರ್ಷಗಳ ಕಾಲ ಎನ್‌ಸಿಎಎ ಚಾಂಪಿಯನ್‌ಶಿಪ್ ಅನ್ನು ಗೆದ್ದಿತ್ತು. ಕ್ರೀಡೆ ಜೊತೆಗೆ ಓದಿನಲ್ಲೂ ಥಾಂಪ್ಸನ್ ಮುಂದೆ ಇದ್ದರು.
ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಈಜು ಸ್ಫರ್ಧೆಯಲ್ಲಿ ಚಾಂಪಿಯನ್ ಆಗಿದ್ದ ಥಾಂಪ್ಸನ್ ತಮ್ಮ ನೆಚ್ಚಿನ ಕ್ರೀಡೆಯನ್ನು ಬಿಟ್ಟು ಓದಿ ಕಡೆ ಸಂಪೂರ್ಣ ಹರಿಸಿದರು. ಈ ಸಂದರ್ಭದಲ್ಲಿ ಸ್ಟ್ಯಾನ್‌ಫೋರ್ಡ್‌ನಿಂದ ಪದವಿ ಪಡೆದ ನಂತರ, ಜೆನ್ನಿ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದರು. 2006 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದುಕೊಂಡರು.
ಇದಾದ ಬಳಿಕ ಬೋಸ್ಟನ್‌ನ ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಅರಿವಳಿಕೆ ಶಾಸ್ತ್ರದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ಥಾಂಪ್ಸನ್, ಬೋಸ್ಟನ್ ಮಕ್ಕಳ ಆಸ್ಪತ್ರೆಯಲ್ಲಿ ಫೆಲೋಶಿಪ್ ಮುಗಿಸಿದರು.
ಪ್ರಸ್ತುತ ಡಾ. ಜೆನ್ನಿ ಥಾಂಪ್ಸನ್ ಅವರು ನಿಯಮಿತವಾಗಿ ಸ್ವಿಮ್ ಅಕ್ರಾಸ್ ಅಮೇರಿಕಾಗಾಗಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಕ್ಯಾನ್ಸರ್ ಸಂಶೋಧನೆಗಾಗಿ ಸಂಗ್ರಹ ನಿಧಿ ಹಣವನ್ನು ಸಂಗ್ರಹಿಸುತ್ತದೆ. ಥಾಂಪ್ಸನ್ ಈಗ ತನ್ನ ಪತಿ ಮತ್ತು ಇಬ್ಬರು ಪುತ್ರರೊಂದಿಗೆ ಚಾರ್ಲ್ಸ್ಟನ್‌ನಲ್ಲಿ ವಾಸ ಮಾಡುತ್ತಿದ್ದಾರೆ.