
ಟೋಕಿಯೋ ಒಲಿಂಪಿಕ್ಸ್ ಯಶಸ್ವಿಯಾಗಿ ಅಂತ್ಯವಾಗಿದೆ. ಇದರಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಬಹುತೇಕ ಈಗ ತಮ್ಮ ತವರನ್ನು ಸೇರಿಕೊಂಡಿದ್ದಾರೆ. ಶತಮಾನಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಈ ವಿಶ್ವದ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಟಿತ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಎಲ್ಲಾ ಕ್ರೀಡಾಪಟುಗಳ ಕನಸಾಗಿದೆ. ಈ ಐತಿಹಾಸಿಕ ಕ್ರೀಡಾಕೂಟದಲ್ಲಿ ಗೆದ್ದ ಪ್ರತಿಯೊಂದು ಪದಕದ ಹಿಂದೆಯೂ ಅದರದ್ದೇ ಆದ ರೋಚಕ ಕಥೆಗಳಿವೆ. ಕ್ರೀಡಾಪಟುಗಳ ಪರಿಶ್ರಮ, ತಾಳ್ಮೆ, ಕನಸುಗಳೆಲ್ಲವೂ ಪದಕದ ತೂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿಯೂ ಅಂಥಾ ಸಾಕಷ್ಟು ರೋಚಕ ಕಥೆಗಳಿವೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೊನೆಯ ಕ್ಷಣದಲ್ಲಿ ಜಮೈಕಾದ ಓಟಗಾರ ಹನ್ಸ್ಲೆ ಪಾರ್ಚ್‌ಮೆಂಟ್ ದಾರಿ ತಪ್ಪಿ ಸ್ಪರ್ಧೆಯಿಂದ ಹೊರಗುಳಿಯುವ ಆತಂಕವನ್ನು ಎದುರಿಸಿದ್ದರು. ಆದರೆ ಬಳಿಕ ವಾಲೆಂಟಿಯರ್ ಒಬ್ಬರು ನೀಡಿದ ಹಣದ ಸಹಾಯದಿಂದ ತಮ್ಮ ಸ್ಪರ್ಧೆಯ ಸ್ಥಳಕ್ಕೆ ಮರಳಿದ್ದು ಮಾತ್ರವಲ್ಲ ಪದಕವನ್ನು ಕೂಡ ಗೆದ್ದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಹನ್ಸ್ಲೆ ಪಾರ್ಚ್‌ಮೆಂಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸವಿವರವಾಗಿ ವಿವರಿಸಿ ಕುತೂಹಲಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.
ಜಮೈಕಾದ 110 ಮೀಟರ್ ಹರ್ಡಲ್ಸ್ ಓಟಗಾರ ಹನ್ಸ್ಲೆ ಪಾರ್ಚ್‌ಮೆಂಟ್ ಸೆಮಿಫೈನಲ್ ಸ್ಪರ್ಧೆಗಾಗಿ ತೆರಳುತ್ತಿದ್ದಾಗ ಬೇರೆ ಸ್ಪರ್ಧೆಯ ತಾಣಕ್ಕೆ ತೆರಳುವ ಬಸ್‌ನಲ್ಲಿ ಪ್ರಯಾಣಿಸಿದ್ದರು. ಆದರೆ ಅಲ್ಲಿಗೆ ತೆರಳಿದ ಬಳಿಕವೇ ತಾನು ಬೇರೆ ಸ್ಥಳಕ್ಕೆ ಬಂದಿರುವ ಅರಿವಾಗಿತ್ತು ಹನ್ಸ್ಲೆ ಪಾರ್ಚ್‌ಮೆಂಟ್ ಅವರಿಗೆ. ಆದರೆ ಕ್ರೀಡಾಕೂಟದ ಸ್ವಯಂಸೇವಕರೊಬ್ಬರು ಅವರ ನೆರವಿಗೆ ಧಾವಿಸಿದ್ದರು. ಮತ್ತೆ ತಮ್ಮ ಸ್ಪರ್ಧೆಯಿರುವ ಕ್ರೀಡಾ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಸೇರುವಂತೆ ಮಾಡಿದ್ದರು.
"ಸೆಮಿಫೈನಲ್ ಸ್ಪರ್ಧೆಗಾಗಿ ಭಾಗವಹಿಸಿದ್ದ ನಾನು ಸರಿಯಾದ ಸ್ಥಳಕ್ಕೆ ತೆರಳುವ ಬಸ್‌ನಲ್ಲಿ ಪ್ರಯಾಣಿಸುವ ಬದಲಿಗೆ ಬೇರೊಂದು ಬಸ್ಸನ್ನು ಹತ್ತಿಬಿಟ್ಟಿದ್ದೆ. ಕಿವಿಗೆ ಇಯರ್ ಫೋನ್ ಹಾಕಿಕೊಂಡು ಸಂಗೀತ ಆಲಿಸುತ್ತಿದ್ದ ನನಗೆ ಹೊರಗಿನ ಯಾವುದು ಕೂಡ ಕೇಳಿಸುತ್ತಿರಲಿಲ್ಲ. ಆದರೆ ಬಸ್‌ನ ಮೇಲೆ ಅಥ್ಲೆಟಿಕ್ ಟ್ರ್ಯಾಕ್‌ನ ಚಿತ್ರವಿರುವುದನ್ನು ನಾನು ಕಂಡಿದ್ದೆ. ಹಿಗಾಗಿ ನಂತರ ನಾನು ಆ ಬಗ್ಗೆ ಯೋಚನೆಯನ್ನು ಕೂಡ ಮಾಡಿರಲಿಲ್ಲ. ಸಂಗೀತವನ್ನು ಆಲಿಸಿಕೊಂಡು ಮಗ್ನವಾಗಿದ್ದೆ. ಕೆಲ ಕ್ಷಣಗಳ ನಂತರ ನಾನು ತಪ್ಪಾದ ದಾರಿಯಲ್ಲಿ ಸಾಗುತ್ತಿರುವುದು ಗಮನಕ್ಕೆ ಬಂದಿತ್ತು. ಆ ಪ್ರದೇಶವನ್ನು ನಾನು ಅದಕ್ಕೆ ಮೊದಲು ಗಮನಿಸಲಿರಲಿಲ್ಲ.
"ಅಲ್ಲಿ ರೋಯಿಂಗ್ ತರಹದ್ದೇನೋ ನಡೆಯುತ್ತಿತ್ತು. ನನಗೆ ಅದರ ಬಗ್ಗೆ ಸ್ಪಷ್ಟತೆಯಿಲ್ಲ. ಬಳಿಕ ಅಲ್ಲಿದ್ದವರು ನನಗೆ ಮತ್ತೆ ಕ್ರೀಡಾಗ್ರಾಮಕ್ಕೆ ಮರಳಿ ಬಸ್ ಹಿಡಿದು ಅಥ್ಲೆಟಿಕ್ಸ್ ಸ್ಟೇಡಿಯಂಗೆ ತೆರಳಬೇಕೆಂದು ತಿಳಿಸಿದರು. ನಾನು ಆ ರೀತಿ ಮಾಡಿದ್ದರೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವೇ ಇರಲಿಲ್ಲ".
"ಅಲ್ಲಿ ನಾನು ಟೋಕಿಯೋ ಒಲಿಂಪಿಕ್ಸ್ 2020ಗೆ ಸೇರಿದ ಒಂದು ಕಾರನ್ನು ಗಮನಿಸಿ ಅವರಲ್ಲಿ ಇನ್ನೊಂದು ತಾಣಕ್ಕೆ ತೆರಳಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದೆ. ಆದರೆ ಅವರೆಲ್ಲಾ ತುಂಬಾ ಕಟ್ಟುನಿಟ್ಟಾಗಿದ್ದರು. ಆಗ ನಾನು ಅಲ್ಲಿ ಓರ್ವ ಸ್ವಯಂ ಸೇವಕಿಯನ್ನು ಕಂಡೆ. ಆಕೆ ನನಗೆ ಹಣವನ್ನು ನೀಡಿ ಒಂದು ಟ್ಯಾಕ್ಸಿಯ ಮೂಲಕ ನನ್ನ ಸ್ಪರ್ಧೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಲು ಸಹಾಯ ಮಾಡಿದಳು. ಈ ರೀತಿಯಾಗಿ ನಾನು ಸರಿಯಾದ ಸಮಯಕ್ಕೆ ಸ್ಪರ್ಧೆ ನಡೆಯುವ ಸ್ಥಳಕ್ಕೆ ತಲುಪಿದ್ದೆ" ಎಂದಿದ್ದಾರೆ ಹನ್ಸ್ಲೆ ಪಾರ್ಚ್‌ಮೆಂಟ್.
"ನಾನು ಆಕೆಯನ್ನು ಹುಡುಕುತ್ತೇನೆ ಮತ್ತು ಆಕೆಗೆ ನಾನು ಪಡೆದ ಚಿನ್ನದ ಪದಕವನ್ನು ತೋರಿಸುತ್ತೇನೆ. ಯಾಕೆಂದರೆ ಆಕೆ ಮಾಡಿದ ಸಹಾಯದಿಂದಾಗಿ ನಾನು ಚಿನ್ನದ ಪದಕವನ್ನು ಗಳಿಸಲು ಸಾಧ್ಯವಾಯಿತು" ಎಂದು ಪಾರ್ಚ್‌ಮೆಂಟ್ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡು ವಿವರಿಸಿದ್ದಾರೆ.