
ಟೋಕಿಯೋ: ಭಾರತದ ಖ್ಯಾತ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್ ಮಹಿಳಾ ಗಾಲ್ಫ್ ವೈಯಕ್ತಿಕ ಸ್ಪರ್ಧೆಯಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಮೂರು ಸುತ್ತಿನಲ್ಲಿ ಈಗಾಗಲೇ ಅದಿತಿ ಟಾಪ್ ಎರಡರಲ್ಲಿ ಸ್ಪರ್ಧೆ ಮುಗಿಸಿದ್ದಾರೆ. ಹೀಗಾಗಿ ದೇಶಕ್ಕೆ ಇದೇ ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಗಾಲ್ಫ್‌ನಲ್ಲಿ ಪದಕ ಬರುವ ನಿರೀಕ್ಷೆಯಿದೆ.
ಮಹಿಳಾ ವೈಯಕ್ತಿಕ ವಿಭಾಗದ ಮೂರು ಸುತ್ತುಗಳು ಮುಗಿದಿದ್ದು ಇದರಲ್ಲಿ ಒಟ್ಟು 201 ಮಂದಿಯಲ್ಲಿ ಕೇವಲ 12 ಮಂದಿ ಉಳಿದಿದ್ದಾರೆ. ಇದರಲ್ಲಿ ಅದಿತಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ನೆಲ್ಲಿ ಕೊರ್ಡಾ ಅವರಿಗಿಂತ ಅದಿತಿ ಮೂರು ಹೆಚ್ಚುವರಿ ಸ್ಟ್ರೋಕ್‌ಗಳನ್ನು ಬಳಸಿಕೊಂಡಿದ್ದಾರೆ.
ಮೊದಲ ಸ್ಥಾನದಲ್ಲಿರುವ ನೆಲ್ಲಿ ಕೊರ್ಡಾ ಮೂರನೇ ಸುತ್ತಿನಲ್ಲಿ 69 ಅಂಕ ಪಡೆದುಕೊಂಡಿದ್ದಾರೆ. ಈ ಸುತ್ತಿನಲ್ಲಿ ಅದಿತಿ 68 ಅಂಕ ಪಡೆದುಕೊಂಡಿದ್ದರು. ಒಟ್ಟಾರೆ 129 ಅಂಕ ಪಡೆದಿರುವ ನೆಲ್ಲಿ ಕೊರ್ಡಾ ಮೊದಲ ಸ್ಥಾನದಲ್ಲಿ, ಅದಿತಿ 133 ಅಂಕಗಳಿಂದ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕೆಳಗಿನ ಸಾಲ್ಕು ಸ್ಥಾನಗಳಲ್ಲಿರುವ ನ್ಯೂಜಿಲೆಂಡ್‌ನ ಲಿಡಿಯಾ ಕೋ, ಆಸ್ಟ್ರೇಲಿಯಾದ ಹನ್ನಾ ಗ್ರೀನ್, ಡೆನ್ಮಾರ್ಕ್‌ನ ಕ್ರಿಸ್ಟಿನ್ ಪೆಡರ್ಸನ್, ಜಪಾನ್‌ನ ಮೊನೆ ಇನಾಮಿ ಈ ನಾಲ್ವರೂ ತಲಾ 203 ಅಂಕಗಳೊಂದಿಗೆ ಮೂರನೇ ಸ್ಥಾನ ಆವರಿಸಿಕೊಂಡಿದ್ದಾರೆ. ಅದಿತಿಗೆ ಆಗಸ್ಟ್ 7ರಂದು 4ನೇ ಸುತ್ತಿನ ಸ್ಪರ್ಧೆ ನಡೆಯಲಿದೆ. ಇದರ ಬಳಿಕ ಅಂತಿಮ ಫಲಿತಾಂಶ ಹೊರ ಬೀಳಲಿದೆ.
ಭಾರತಕ್ಕೆ ಎರಡು ಬೆಳ್ಳಿ, ಮೂರು ಕಂಚಿನ ಪದಕಗಳು
ಈ ಬಾರಿ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಖಾತೆಯಲ್ಲಿ ಈವರೆಗೆ ಒಟ್ಟು ಐದು ಪದಕಗಳು ಸೇರಿಕೊಂಡಿವೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳು ಬರುತ್ತಿರುವುದು ಇದೇ ಮೊದಲಸಾರಿ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರೆ, ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಎರಡನೇ ಪದಕವಾಗಿ ಕಂಚು ಗೆದ್ದಿದ್ದರು. ಇನ್ನು ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಕೂಡ ಭಾರತಕ್ಕೆ ಕಂಚಿನ ಪದಕ ತಂದಿದ್ದರು. ಅದಾಗಿ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ ಲಭಿಸಿತ್ತು. ಇನ್ನು ಪುರುಷರ 57 ಕೆಜಿ ರಸ್ಲಿಂಗ್‌ನಲ್ಲಿ ರವಿಕುಮಾರ್ ದಾಹಿಯ ಅವರಿಗೆ ಬೆಳ್ಳಿ ಪದಕ ಲಭಿಸಿದೆ. ಒಟ್ಟಿಗೆ 5 ಪದಕಗಳು ಈಗ ಭಾರತದ ಖಾತೆಯಲ್ಲಿವೆ. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದಾಸೆ ಇಲ್ಲವಾಗಿದೆ.
ಅಥ್ಲೆಟಿಕ್ಸ್‌ನಲ್ಲಿ ನೀರಜ್ ಚೋಪ್ರಾ ಫೈನಲ್‌ಗೆ
ಅಥ್ಲೆಟಿಕ್ಸ್ ವಿಭಾಗದಲ್ಲಿ ಒಂದು ಪದಕದ ನಿರೀಕ್ಷೆಯಿದೆ. ಭಾರತದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಈಗಾಗಲೇ ಫೈನಲ್‌ಗೆ ಪ್ರವೇಶಿಸಿದ್ದಾರೆ. ಆಗಸ್ಟ್ 4ರಂದು ನಡೆದಿದ್ದ ಗ್ರೂಪ್ ಹಂತದ ಸ್ಪರ್ಧೆಯಲ್ಲಿ ಗ್ರೂಪ್ 'ಎ'ಯಲ್ಲಿದ್ದ ಚೋಪ್ರಾ ಉತ್ತಮ ಪ್ರದರ್ಶನದೊಂದಿಗೆ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಚೋಪ್ರಾ 86.65 ಮೀಟರ್ ಸಾಧನೆಯೊಂದಿಗೆ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿದ್ದಾರೆ. ಈ ವೇಳೆ ವಿಶ್ವ ನಂ.1 ಜಾವೆಲಿನ್ ಥ್ರೋವರ್ ಜರ್ಮನಿಯ ಜೋಹಾನ್ಸ್ ವೆಟರ್ ಮೊದಲ ಪ್ರಯತ್ನದಲ್ಲಿ 82.04 ಮೀಟರ್ ಸಾಧನೆ ತೋರಿದ್ದಾರೆ. ಚೋಪ್ರಾ ಅವರ ಫೈನಲ್ ಸ್ಪರ್ಧೆ ಆಗಸ್ಟ್ 7ರಂದು ಶನಿವಾರ ನಡೆಯಲಿದೆ. ಜುಲೈ 23ರಂದು ಆರಂಭಗೊಂಡಿರುವ ಟೋಕಿಯೋ ಒಲಿಂಪಿಕ್ಸ್ ಆಗಸ್ಟ್ 8ರಂದು ಸಮಾರೋಪ ಸಮಾರಂಭದ ಬಳಿಕ ತೆರೆ ಕಾಣಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ಭಾಗದಿಂದ ಆಗಮಿಸಿರುವ 11000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಟ್ಟು 205 ರಾಷ್ಟ್ರಗಳಿಂದ ಕ್ರೀಡಾಳುಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ರೀಡಾಪುಟಗಳೆಲ್ಲ 17 ದಿನಗಳಲ್ಲಿ 50 ವಿಭಾಗಗಳಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.