
ಭಾರತದ ಶೂಟಿಂಗ್ ಸ್ಪರ್ಧಿಗಳಾದ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಮತ್ತು ಸಂಜೀವ್ ರಜಪೂತ್ 50 ಮೀ ಶೂಟಿಂಗ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ ಪಡೆದುಕೊಳ್ಳುವ ಅರ್ಹತಾ ಸುತ್ತಿನಲ್ಲಿ ಹೀನಾಯವಾಗಿ ಸೋತಿದ್ದಾರೆ.
ಇಂದು (ಆಗಸ್ಟ್ 2) ನಡೆದ ಪುರುಷರ 50 ಮೀ ರೈಫಲ್ 3 ಪೊಸಿಷನ್ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದ ಭಾರತದ ಶೂಟರ್ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಮತ್ತು ಸಂಜೀವ್ ರಜಪೂತ್ ನಿರಾಸೆಯನ್ನು ಉಂಟುಮಾಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದ 39 ಸ್ಪರ್ಧಿಗಳ ಪೈಕಿ ಟಾಪ್ 8 ಸ್ಪರ್ಧಿಗಳು ಮುಂದಿನ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡರು. ಆದರೆ ಈ ಸ್ಪರ್ಧೆಯಲ್ಲಿ ಭಾರತದ ಶೂಟರ್ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ 1167 ಅಂಕಗಳೊಂದಿಗೆ 21ನೇ ಸ್ಥಾನವನ್ನು ಪಡೆದುಕೊಂಡರೆ ಮತ್ತೊಬ್ಬ ಶೂಟರ್ ಸಂಜೀವ್ ರಜಪೂತ್ 1157 ಅಂಕಗಳನ್ನು ಗಳಿಸಿ 32ನೇ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾದರು.
ಟೋಕಿಯೊ ಒಲಿಂಪಿಕ್ಸ್ ಶೂಟಿಂಗ್ ವಿಭಾಗದಲ್ಲಿ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಮತ್ತು ಸಂಜೀವ್ ರಜಪೂತ್ ವಿಫಲರಾದರೆ ಅತ್ತ ಭಾರತೀಯ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮಹಿಳಾ ಹಾಕಿ ತಂಡವನ್ನು ಸದೆಬಡಿದು ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಕ್ವಾರ್ಟರ್ ಫೈನಲ್ ಹಂತದಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಭಾರತ ಮಹಿಳಾ ಹಾಕಿ ತಂಡ 1-0 ಅಂತರದಿಂದ ಜಯ ಸಾಧಿಸುವುದರ ಮೂಲಕ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ಗುರ್ಜಿತ್ ಕೌರ್ ಈ ಪಂದ್ಯದ ಎರಡನೇ ಕ್ವಾರ್ಟರ್ ಸಮಯದಲ್ಲಿ ಬಾರಿಸಿದ ಏಕೈಕ ಗೋಲಿನಿಂದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 1-0 ಅಂತರದಿಂದ ಯಶಸ್ವಿಯಾಗಿ ಸದೆಬಡಿಯಿತು.
ಅಷ್ಟೇ ಅಲ್ಲದೆ ಭಾನುವಾರ (ಆಗಸ್ಟ್ 1) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಪುರುಷರ ಹಾಕಿ ತಂಡದ ವಿರುದ್ಧ ಭಾರತ ಪುರುಷ ಹಾಕಿ ತಂಡ 2-0 ಅಂತರದಿಂದ ಜಯ ಗಳಿಸುವುದರ ಮೂಲಕ ಸೆಮಿಫೈನಲ್ ಪ್ರವೇಶವನ್ನು ಮಾಡಿತು. ಈ ಮೂಲಕ 4 ದಶಕಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿತು.
ಇನ್ನು ಡಿಸ್ಕಸ್ ಥ್ರೋ ವಿಭಾಗದಲ್ಲಿ ಭಾರತದ ಆಟಗಾರ್ತಿ ಕಮಲ್ ಪ್ರೀತ್ ಕೌರ್ ಫೈನಲ್ ಪ್ರವೇಶಿಸಿದ್ದು ಇಂದು (ಆಗಸ್ಟ್ 2) ಸಂಜೆ 4:30ಕ್ಕೆ ಫೈನಲ್ ಸುತ್ತಿನಲ್ಲಿ ಹಣಾಹಣಿ ನಡೆಸಲಿದ್ದಾರೆ. ಈ ಸುತ್ತಿನಲ್ಲಿ ಭಾರತದ ಕಮಲ್ ಪ್ರೀತ್ ಕೌರ್ ಜಯ ಸಾಧಿಸಿದರೆ ಭಾರತಕ್ಕೆ ಪ್ರಸ್ತುತ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನ ಲಭಿಸಲಿದೆ ಅಥವಾ ಸೋತರೆ ಬೆಳ್ಳಿಪದಕ ಲಭಿಸಲಿದ್ದು ಮೀರಾಬಾಯಿ ಚಾನು ನಂತರ ಮತ್ತೋರ್ವ ಭಾರತೀಯೆ ಬೆಳ್ಳಿ ಪದಕವನ್ನು ಜಯಿಸಿದಂತಾಗುತ್ತದೆ. ಹಾಗೂ ಭಾನುವಾರದಂದು ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಕಂಚಿನ ಪದಕದ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಚೈನಾದ ಬ್ಯಾಡ್ಮಿಂಟನ್ ಆಟಗಾರ್ತಿ ಹಿ ಬಿಂಗ್ ಜಿಯಾವೊ ವಿರುದ್ಧ 21-13, 21-15 ನೇರ ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಎರಡು ಬಾರಿ ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯೆ ಎಂಬ ಕೀರ್ತಿಗೆ ಪಿವಿ ಸಿಂಧು ಪಾತ್ರರಾದರು. ಹಾಗೂ ಪಿ ವಿ ಸಿಂಧು ಗೆದ್ದ ಈ ಪುಸ್ತಕದ ಮೂಲಕ ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ ಎರಡನೇ ಪದಕವನ್ನು ಗೆದ್ದಂತಾಗಿದೆ.