ಟೋಕಿಯೋ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಎಡವಿದ ಶ್ರೀಶಂಕರ್

ಟೋಕಿಯೊ ಒಲಿಂಪಿಕ್ಸ್ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು ಇದುವರೆಗೂ ಭಾರತದ ಪರ ಮೀರಾಬಾಯಿ ಚಾನು ರಜತ ಪದಕವನ್ನು ಗೆದ್ದಿತ್ತು ಬಿಟ್ಟರೆ ಬೇರೆ ಯಾವುದೇ ಸ್ಪರ್ಧೆಯೂ ಸಹ ಪದಕವನ್ನು ಗೆದ್ದಿಲ್ಲ.
ಟೋಕಿಯೋ ಒಲಿಂಪಿಕ್ಸ್ ಒಂಭತ್ತನೇ ದಿನದಂದು ನಡೆದ ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಶ್ರೀ ಶಂಕರ್ ಮುರಳಿ ಭಾಗವಹಿಸಿದ್ದರು. ಗ್ರೂಪ್ ಬಿನಿಂದ 16 ಸ್ಪರ್ಧಿಗಳು ಈ ಸುತ್ತಿನಲ್ಲಿ ಭಾಗವಹಿಸಿದ್ದು ಭಾರತದ ಶ್ರೀ ಶಂಕರ್ ಮುರಳಿ 13ನೇ ಸ್ಥಾನವನ್ನು ಪಡೆದುಕೊಂಡು ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದ್ದಾರೆ. ಭಾರತದ ಶ್ರೀ ಶಂಕರ್ ಮುರಳಿ ಮೊದಲನೇ ಸುತ್ತಿನಲ್ಲಿ 7.69 ಮೀಟರ್ ಉದ್ದಕ್ಕೆ ಜಿಗಿದರು. ಆದರೆ ನಂತರ ನಡೆದ ಎರಡೂ ಸುತ್ತುಗಳಲ್ಲಿ ಮೊದಲ ಸುತ್ತಿನಲ್ಲಿ ಜಿಗಿದಿದ್ದ 7.69 ಮೀಟರ್ ಉದ್ದವನ್ನು ದಾಟುವಲ್ಲಿ ಶ್ರೀಶಂಕರ್ ಮುರಳಿ ವಿಫಲರಾದರು. ಎರಡನೇ ಸುತ್ತಿನಲ್ಲಿ 7.51 ಮೀಟರ್ ಉದ್ದಕ್ಕೆ ಜಿಗಿದ ಶ್ರೀಶಂಕರ್ ಮುರಳಿ ಮೂರನೇ ಸುತ್ತಿನಲ್ಲಿ 7.43 ಮೀಟರ್ ಉದ್ದಕ್ಕೆ ಜಿಗಿದರು.
ಇನ್ನು ಪದಕದ ಆಸೆಯನ್ನು ಮೂಡಿಸಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಸೆಮಿಫೈನಲ್ ಹಂತದಲ್ಲಿ ಚೀನಾದ ತೈಪೆಯ ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ ಸೋಲನುಭವಿಸಿದ್ದಾರೆ. ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ವಿರುದ್ಧ ತೈಪೆಯ ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ 21-18, 21-13 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಫೈನಲ್ ಪ್ರವೇಶ ಮಾಡಿದ್ದಾರೆ. ಸೆಮಿಫೈನಲ್ ಸುತ್ತಿನಲ್ಲಿ ಸೋತ ಪಿವಿ ಸಿಂಧು ಭಾನುವಾರ ಚೀನಾದ ಬ್ಯಾಡ್ಮಿಂಟನ್ ಆಟಗಾರ್ತಿ ಹೆ ಬಿಂಗ್ ಜಿಯಾವೊ ವಿರುದ್ಧ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ.
ಅತ್ತ ಡಿಸ್ಕಸ್ ಥ್ರೋ ವಿಭಾಗದಲ್ಲಿ ಭಾರತದ ಕಮಲ್ ಪ್ರೀತ್ ಕೌರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಪದಕದ ನಿರೀಕ್ಷೆಯಿದೆ. 64 ಮೀ. ಸಾಧನೆಯೊಂದಿಗೆ ಫೈನಲ್ ಪ್ರವೇಶ ಮಾಡಿರುವ ಭಾರತದ ಕ್ರೀಡಾಪಟು ಕಮಲ್ ಪ್ರೀತ್ ಕೌರ್ ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾದ ಸಾಂಡ್ರಾ ಪೆರ್ಕೊವಿಕ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಭಾರತದ ಕಮಲ್ ಪ್ರೀತ್ ಕೌರ್ 64 ಮೀ ಸಾಧನೆಯೊಂದಿಗೆ ಫೈನಲ್ ಪ್ರವೇಶ ಮಾಡಿದ್ದರೆ ಕ್ರೊವೇಷಿಯಾದ ಸಾಂಡ್ರಾ ಪೆರ್ಕೊವಿಕ್ 63.75 ಮೀ ಸಾಧನೆಯೊಂದಿಗೆ ಫೈನಲ್ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಈ ಇಬ್ಬರ ನಡುವಿನ ಫೈನಲ್ ಪಂದ್ಯ ಆಗಸ್ಟ್ 2ರಂದು ನಡೆಯಲಿದೆ.
ಭಾರತದ ಖ್ಯಾತ ಬಾಕ್ಸರ್ ಅಮಿತ್ ಫಾಂಗಲ್ 52 ಕೆಜಿ ವಿಭಾಗದಲ್ಲಿ ಸೋಲನ್ನು ಅನುಭವಿಸಿದ್ದರೆ, ಪುರುಷರ ಆರ್ಚರಿ ವಿಭಾಗದಲ್ಲಿ ಭಾರತದ ಅತನು ದಾಸ್ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸೋಲುವುದರ ಮೂಲಕ ನಿರಾಸೆ ಮೂಡಿಸಿದ್ದಾರೆ. ಇತ್ತ ಭಾರತೀಯ ಮಹಿಳಾ ಹಾಕಿ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 4-3 ಅಂತರದ ಗೆಲುವು ಸಾಧಿಸುವುದರ ಮೂಲಕ ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತದ ವಂದನಾ ಕಟಾರಿಯಾ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications