ಟೋಕಿಯೋ ಒಲಿಂಪಿಕ್ಸ್: ಬಂಗಾರ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ!

ಟೋಕಿಯೋ: ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಬಂಗಾರದ ಪದಕ ಬಂದಿರಲಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ದೇಶಕ್ಕೆ ಚೊಚ್ಚಲ ಬಂಗಾರ ಗೆದ್ದಿದ್ದಾರೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಬಂಗಾರದ ಪದಕ ಜಯಿಸಿದ್ದಾರೆ. ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸುತ್ತಿರುವ 7ನೇ ಪದಕ ಮತ್ತು ಚೊಚ್ಚಲ ಬಂಗಾರ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಆರಂಭಿಕ ಕ್ರೀಡಾಕೂಟದಲ್ಲೇ ಭಾರತಕ್ಕೆ ಬಂಗಾರದ ಮೆರಗು ತಂದಿದ್ದಾರೆ.
ಶನಿವಾರ (ಆಗಸ್ಟ್ 7) ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮೂರು ಪ್ರಯತ್ನಗಳಲ್ಲಿ ಚೋಪ್ರಾ ತನ್ನ ದ್ವಿತೀಯ ಪ್ರಯತ್ನದಲ್ಲಿ ದೇಶಕ್ಕೆ ಬಂಗಾರ ಎಸೆತದ ಸಾಧನೆ ತೋರಿದ್ದಾರೆ.
ನೀರಜ್ ಚೋಪ್ರಾ ಮೂರು ಎಸೆತಗಳು ಹೀಗಿವೆ; ಆರಂಭದಲ್ಲಿ 87.03 ಮೀಟರ್, ಎರಡನೇ ಯತ್ನದಲ್ಲಿ 87.58 ಮೀಟರ್ ಮತ್ತು ಮೂರನೇ ಯತ್ನದಲ್ಲಿ 76.79 ಮೀಟರ್ ಸಾಧನೆ ನೀರಜ್ ತೋರಿದ್ದರು. ಇದರಲ್ಲಿ ಎರಡನೇ ಯತ್ನ ಪದಕ ತಂದಿದೆ. ಕೊನೇ ಎಸೆತ ಉತ್ತಮವಿರಲಿಲ್ಲ. ಆದರೆ ಅದಾಗಾಗಲೇ ಚೋಪ್ರಾ ಮೊದಲಸ್ಥಾನದಲ್ಲಿದ್ದರು.

ಅಗ್ರ ಐದು ಸ್ಥಾನ ಪಡೆದುಕೊಂಡವರ ಪಟ್ಟಿ
ಪುರುಷರ ವಿಭಾಗದ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ (87.58 ಮೀಟರ್) ಪಡೆದುಕೊಂಡರೆ, ಝೆಕ್ ರಿಪಬ್ಲಿಕ್‌ನ ಜಾಕೂಬ್ ವಾಡ್ಲೆಜ್ಚ್ 86.67 ಮೀಟರ್ ಸಾಧನೆಯೊಂದಿಗೆ ಈ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇನ್ನು ಕಂಚಿನ ಪದಕ ಝೆಕ್ ರಿಪಬ್ಲಿಕ್‌ನವರೇ ವೆಸೆಲಿ ವಿಟೆಜ್ಸ್ಲಾವ್ (85.44 ಮೀಟರ್) ಪಾಲಾಗಿದೆ. ನಾಲ್ಕನೇ ಸ್ಥಾನ ಜರ್ಮನಿಯ ಜೂಲಿಯನ್ ವೆಬ್ಬರ್, ಐದನೇ ಸ್ಥಾನ ಪಾಕಿಸ್ತಾನದ ಅರ್ಷದ್ ನದೀಮ್ ಪಡೆದುಕೊಂಡಿದ್ದಾರೆ.

ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಸಿಕ್ಕ ಎರಡನೇ ಬಂಗಾರದ ಪದಕ
ಶನಿವಾರ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಗೆದ್ದ ಪದಕ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಸಿಕ್ಕ ಎರಡನೇ ಚಿನ್ನದ ಪದಕ ಮತ್ತು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸಿಕ್ಕ ಮೊದಲ ಬಂಗಾರದ ಪದಕ ಮತ್ತು ಟೋಕಿಯೋದಲ್ಲಿ ಸಿಕ್ಕ 7ನೇ ಪದಕ. ಇದಕ್ಕೂ ಮುನ್ನ ಭಾರತದಿಂದ ಶೂಟರ್ ಅಭಿನವ್ ಬಿಂದ್ರ (2008ರ ಬೀಜಿಂಗ್ ಒಲಿಂಪಿಕ್ಸ್) ಬಂಗಾರ ಗೆದ್ದಿದ್ದರು. ಅದು ಬಿಟ್ಟರೆ ವೈಯಕ್ತಿಕ ವಿಭಾಗದಲ್ಲಿ ಬಂಗಾರ ಗೆದ್ದಿದ್ದು ಚೋಪ್ರಾ ಮಾತ್ರ. ಇನ್ನುಳಿದ ಬಂಗಾರದ ಪದಕಗಳು ಹಾಕಿ ತಂಡದಿಂದ ಬಂದಿತ್ತು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 7ನೇ ಪದಕ
ಆಗಸ್ಟ್ 7ರ ಶನಿವಾರ 6 PM ಹೊತ್ತಿಗೆ ಭಾರತದ ಖಾತೆಯಲ್ಲಿ ಒಟ್ಟು 7 ಪದಕಗಳಿದ್ದವು. ಮೀರಾಬಾಯಿ ಗೆದ್ದ ಬೆಳ್ಳಿ ಪದಕ, ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಗೆದ್ದಿರುವ ಕಂಚಿನ ಪದಕ, ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಗೆದ್ದ ಕಂಚು, ರಸ್ಲರ್ ರವಿಕುಮಾರ್ ದಾಹಿಯ ಗೆದ್ದ ಬೆಳ್ಳಿ ಪದಕ, ಪುರುಷರ ಹಾಕಿ ತಂಡ ಗೆದ್ದ ಕಂಚಿನ ಪದಕ ಮತ್ತು ರಸ್ಲರ್ ಬಜರಂಗ್ ಪೂನಿಯಾ ಗೆದ್ದ ಕಂಚಿನ ಪದಕ ಮತ್ತು ನಿರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಗೆದ್ದ ಬಂಗಾರದ ಪದಕಗಳು ಇದರಲ್ಲಿ ಸೇರಿವೆ. ಇದು ಭಾರತದ ಇತಿಹಾಸದಲ್ಲೇ ಒಲಿಂಪಿಕ್ಸ್ ಕ್ರೀಡಾಕೂಟವೊಂದರಲ್ಲಿ ದೇಶಕ್ಕೆ ಬಂದ ಅತೀ ಹೆಚ್ಚಿನ ಪದಕಗಳು. ಇದಕ್ಕೂ ಮುನ್ನ ಭಾರತ 6 ಪದಕಗಳನ್ನು ಗೆದ್ದಿದ್ದೆ ಹೆಚ್ಚೆನಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications