ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ವಿಮಾನ ಸಂಸ್ಥೆಗಳಿಂದ ಭರ್ಜರಿ ಆಫರ್!

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ವರ್ಷ ಹೊಸ ಇತಿಹಾಸ ನಿರ್ಮಿಸಿದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದು ಬಂಗಾರದ ಪದಕ ಸೇರಿ ಒಟ್ಟು 7 ಪದಕಗಳನ್ನು ಗೆದ್ದ ದಾಖಲೆ ನಿರ್ಮಿಸಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಷ್ಟು ಪದಕ ಗೆಲ್ಲುತ್ತಿರುವುದು ಇದೇ ಮೊದಲು. 6 ಪದಕಗಳನ್ನು ಗೆದ್ದಿದ್ದೇ ಹಿಂದಿನ ದಾಖಲೆಯಾಗಿತ್ತು. ಭಾರತದ ಹಿರಿಮೆಯನ್ನು ಬಾನೆತ್ತರಕೆ ಹಾರಿಸಿದ ಅಥ್ಲೀಟ್‌ಗಳಿಗೆ ವಿಮಾನ ಯಾನ ಸಂಸ್ಥೆಗಳಾದ ಗೋ ಫಸ್ಟ್ ಮತ್ತು ಸ್ಟಾರ್ ಏರ್ ಭರ್ಜರಿ ಆಫರ್ ನೀಡಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಆರು ಅಥ್ಲೀಟ್‌ಗಳು ಮತ್ತು ಪುರುಷರ ಹಾಕಿ ತಂಡಕ್ಕೆ ಉಚಿತ ಪ್ರಯಾಣದ ಆಫರ್ ಅನ್ನು ಗೋ ಫಸ್ಟ್, ಸ್ಟಾರ್ ಏರ್ ನೀಡಿದೆ. ಇದರಲ್ಲಿ ಒಂದು ವಿಮಾನಯಾನ ಸಂಸ್ಥೆ 5 ವರ್ಷಗಳ ಕಾಲ ಉಚಿತ ಪ್ರಯಾಣದ ಆಫರ್ ನೀಡಿದರೆ ಇನ್ನೊಂದು ಸಂಸ್ಥೆ ಪದಕ ವಿಜೇತರಿಗೆ ಜೀವನಪರ್ಯಂತ ಉಚಿತ ಪ್ರಯಾಣದ ಆಫರ್ ನೀಡಿದೆ.

ಭಾರತಕ್ಕೆ ಒಟ್ಟು 7 ಪದಕ, ಒಲಿಂಪಿಕ್ಸ್ ಹೊಸ ದಾಖಲೆ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಈ ಬಾರಿ ಅತೀ ಹೆಚ್ಚಿನ ಪದಕ ಗೆದ್ದು ಗಮನ ಸೆಳೆದಿತ್ತು. ಒಟ್ಟು 7 ಪದಕಗಳನ್ನು ಭಾರತ ಗೆದ್ದಿದ್ದು, ಇದರಲ್ಲಿ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳು ಸೇರಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಮೊದಲ ಪದಕವಾಗಿ ಗೆದ್ದಿದ್ದರು. ಆ ಬಳಿಕ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚು ಗೆದ್ದರು. ಮಹಿಳಾ 69 ಕೆಜಿ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಮತ್ತೊಂದು ಕಂಚು ಸೇರಿಸಿದ್ದರು. ಆ ಬಳಿಕ ಪುರುಷರ ಹಾಕಿಯಲ್ಲೂ ಭಾರತಕ್ಕೆ ಕಂಚಿನ ಪದಕ ಒಲಿದಿತ್ತು. ಬಳಿಕ ನಡೆದ ಪುರುಷರ ರಸ್ಲಿಂಗ್ 57 ಕೆಜಿ ವಿಭಾಗದಲ್ಲಿ ಭಾರತದ ರವಿಕುಮಾರ್ ದಾಹಿಯಾ ಬೆಳ್ಳಿ ಜಯಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಭಜರಂಗ್ ಪೂನಿಯಾ ಕೂಡ ಕಂಚು ಗೆದ್ದರು. ಕೊನೇಯದಾಗಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾಗೆ ಪುರುಷರ ಜಾವೆಲಿನ್ ಥ್ರೋನಲ್ಲಿ ಬಂಗಾರ ಲಭಿಸಿತ್ತು.

ಪದಕ ಗೆದ್ದವರಿಗೆ ಆಫರ್‌ಗಳ ಮೇಲೆ ಆಫರ್
ಗೋ ಏರ್ ಎಂದು ಈ ಮೊದಲು ಹೆಸರನ್ನಿಸಿಕೊಂಡಿದ್ದ ಗೋ ಫಸ್ಟ್ ಸಂಸ್ಥೆ ಪದಕ ಗೆದ್ದ ಎಲ್ಲಾ 6 ಅಥ್ಲೀಟ್‌ಗಳು ಮತ್ತು ಪುರುಷರ ಹಾಕಿ ತಂಡಕ್ಕೆ 5 ವರ್ಷಗಳ ಕಾಲ ಉಚಿತ ಪ್ರಯಾಣದ ಆಫರ್ ನೀಡಿದೆ. ಇನ್ನು ಭಾರತದ ಒಟ್ಟು 13 ನಗರಗಳನ್ನು ಸಂಪರ್ಕಿಸುವ ಸ್ಟಾರ್ ಏರ್ ಎನ್ನುವ ವಿಮಾನ ಯಾನ ಸಂಸ್ಥೆ ಪದಕ ವಿಜೇತರಿಗೆ ಜೀವನಪರ್ಯಂತ ಉಚಿತ ಪ್ರಯಾಣವೆಂದಿದೆ. "ಏಳು ಒಲಿಂಪಿಕ್ಸ್ ಪದಕ ವಿಜೇತರಾದ ಮೀರಾಬಾಯಿ ಚಾನು (ವೇಟ್ ಲಿಫ್ಟಿಂಗ್), ಪಿ.ವಿ. ಸಿಂಧು (ಬ್ಯಾಡ್ಮಿಂಟನ್), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಪುರುಷರ ಹಾಕಿ ತಂಡ, ರವಿ ಕುಮಾರ್ ದಹಿಯಾ (ಕುಸ್ತಿ), ಬಜರಂಗ ಪೂನಿಯಾ (ಕುಸ್ತಿ) ಮತ್ತು ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (ಜಾವೆಲಿನ್ ಥ್ರೋ) ಇವರಿಗೆ ಮುಂದಿನ ಐದು ವರ್ಷಗಳ ಕಾಲ ಯಾವುದೇ ಗೋ ಫಸ್ಟ್ ವಿಮಾನಗಳಲ್ಲಿ ಉಚಿತ ವಿಮಾನ ಪ್ರಯಾಣವನ್ನು ಒದಗಿಸಲಾಗುವುದು," ಎಂದು ಗೋ ಫಸ್ಟ್ ಹೇಳಿದೆ.

ಟೋಕಿಯೋಗೆ ಹೋಗಿದ್ದ 127 ಮಂದಿಯಲ್ಲಿ 7 ಪದಕಗಳು
ಮತ್ತೊಂದು ವಿಮಾನಯಾನ ಸಂಸ್ಥೆ ಸ್ಟಾರ್ ಏರ್ ಕೂಡ ಭಾನುವಾರ (ಆಗಸ್ಟ್ 8), "ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಮ್ಮ ಚಾಂಪಿಯನ್‌ಗಳಿಗೆ ಬದುಕಿನುದ್ದಕ್ಕೂ ಉಚಿತ ಪ್ರಯಾಣದ ಆಫರ್ ನೀಡಲು ನಾವೀ ಸಂದರ್ಭ ಬಳಸಿಕೊಳ್ಳುತ್ತಿದ್ದೇವೆ," ಎಂದು ಹೇಳಿದೆ. ಟೋಕಿಯೋಗೆ ತೆರಳಿದ್ದ 127 ಮಂದಿಯಲ್ಲಿ ಕೆಲವರು ಸ್ಪರ್ಧೆ ಮುಗಿದ ಬಳಿಕ ಭಾರತಕ್ಕೆ ಈಗಾಗಲೇ ವಾಪಸ್ಸಾಗಿದ್ದಾರೆ. ಅಂದ್ಹಾಗೆ ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದರು. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸಿದ್ದರು. ಹಿಂದಿನ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications