ಟೋಕಿಯೋ ಒಲಿಂಪಿಕ್ಸ್: ಡಿಸ್ಕಸ್ ಥ್ರೋನಲ್ಲಿ ಭಾರತಕ್ಕೆ ಪದಕದ ನಿರೀಕ್ಷೆ!

ಟೋಕಿಯೋ: ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ 2021 ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಪದಕ ಲಭಿಸುವ ನಿರೀಕ್ಷೆ ಮೂಡಿದೆ. ಮಹಿಳಾ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್‌ಪ್ರೀತ್ ಕೌರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಶನಿವಾರ (ಜುಲೈ) ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಕೌರ್ ಅತ್ಯುತ್ತಮ ಪ್ರದರ್ಶನದೊಂದಿಗೆ ದ್ವಿತೀಯ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿ ಅಂತಿಮ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.
ಗ್ರೂಪ್ 'ಎ'ಯಲ್ಲಿರುವ ಕಮಲ್ ಪ್ರೀತ್ 64 ಮೀ. ದೂರ ಸಾಧನೆಯೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದಾರೆ. ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರಾಗಿ ಕಮಲ್‌ಪ್ರೀತ್ ಕಾಣಿಸಿಕೊಂಡಿದ್ದಾರೆ. ಗ್ರೂಪ್ ಬಿ ಯಲ್ಲಿ ಕ್ರೊವೇಶಿಯಾದ ಸಾಂಡ್ರಾ ಪೆರ್ಕೊವಿಕ್ 63.75 ಮೀ. ಸಾಧನೆಯೊಂದಿಗೆ ಅಂತಿಮ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

ಆಗಸ್ಟ್ 2ಕ್ಕೆ ಫೈನಲ್
2016 ರಿಯೋ ಒಲಿಂಪಿಕ್ಸ್‌ಮತ್ತು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಡಿಸ್ಕಸ್ ಥ್ರೋನಲ್ಲಿ ಬಂಗಾರ ಗೆದ್ದಿದ್ದ ಸಾಂಡ್ರಾ ಪೆರ್ಕೊವಿಕ್ 63.75 ಮೀ. ಅತ್ಯುತ್ತಮ ಸಾಧನೆ ತೋರಿದ್ದಾರೆ. ಹೀಗಾಗಿ ಭಾರತಕ್ಕೆ ಪದಕದ ನಿರೀಕ್ಷೆಯಿದೆ. ಕೌರ್‌ಗೆ ಪದಕ ಸಿಕ್ಕರೆ ಇದು ಈ ಒಲಿಂಪಿಕ್ಸ್‌ನಲ್ಲಿ ಈವರೆಗೆ ಭಾರತಕ್ಕೆ ಲಭಿಸುತ್ತಿರುವ ಮೂರನೇ ಪದಕ ಇದಾಗಲಿದೆ. ಮಹಿಳಾ ವಿಭಾಗದ ಡಿಸ್ಕಸ್ ಥ್ರೋ ಫೈನಲ್ ಪಂದ್ಯ ಆಗಸ್ಟ್ 2ರಂದು ನಡೆಯಲಿದೆ ಹೀಗಾಗಿ ಕಮಲ್‌ಪ್ರೀತ್ ಕೌರ್ ಪ್ರದರ್ಶನ ತೀವ್ರ ಕುತೂಹಲ ಮೂಡಿಸಿದೆ. ಈವರೆಗಿನ ಕೌರ್ ಪ್ರದರ್ಶನ ನೋಡಿದರೆ ಭಾರತಕ್ಕೆ ಮಹಿಳಾ ಡಿಸ್ಕಸ್ ಥ್ರೋನಲ್ಲಿ ಬಹುತೇಕ ಪದಕ ಖಚಿತವೆನಿಸಿದೆ.

ಲವ್ಲಿನಾ ಪದಕ ಖಾತರಿ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಬೇರೆ ಪದಕಗಳು ಲಭಿಸಿಲ್ಲ. ಆದರೆ ಮಹಿಳಾ 69 ಕೆಜಿ ವಿಭಾಗದ ವೆಲ್ಟರ್‌ವೇಟ್ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಪದಕ ಖಾತರಿಪಡಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು.

ಭಾರತದ ಪದಕದ ನಿರೀಕ್ಷೆ
ಭಾರತಕ್ಕೆ ಹೆಚ್ಚಿನ ಪದಕಗಳ ನಿರೀಕ್ಷೆಯಿದ್ದಿದ್ದು ಶೂಟಿಂಗ್ ವಿಭಾಗದಲ್ಲಿ. ಆದರೆ ಶೂಟಿಂಗ್‌ನಲ್ಲಿ ಪ್ರತಿಭಾನ್ವಿತರಾದ ಮನು ಭಾಕರ್, ಸೌರಭ್ ಚೌಧರಿ ಈಗಾಗಲೇ ಪದಕದಾಸೆ ಕೈ ಚೆಲ್ಲಿದ್ದಾರೆ. ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್, ವಿಶ್ವ ನಂ.1 ಆರ್ಚರ್ ದೀಪಿಕಾ ಕುಮಾರಿ, ಟೆನಿಸ್ ನಲ್ಲಿ ಸಾನಿಯಾ ಮಿರ್ಝಾ, ಅಂಕಿತಾ ರೈನಾ, ಟೇಬಲ್ ಟೆನಿಸ್ ನಲ್ಲಿ ಮಣಿಕಾ ಬಾತ್ರಾ ಮೊದಲಾದವರು ಈಗಾಗಲೇ ಸೋತು ಕ್ರೀಡಾಕೂಟದಿಂದ ಹೊರ ಬಿದ್ದಿದ್ದಾರೆ. ಇನ್ನು ಪದಕದ ನಿರೀಕ್ಷೆಗಳೆಂದರೆ ಬ್ಯಾಡ್ಮಿಂಟನ್‌ನಲ್ಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು, ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ಕಮಲ್‌ಪ್ರೀತ್ ಕೌರ್ ಮತ್ತು ಇನ್ನೊಂದೆರಡು ಸ್ಪರ್ಧೆಗಳಲ್ಲಿ.

ಭಾರತಕ್ಕೆ 51ನೇ ಸ್ಥಾನ
31 ಜುಲೈ 9.40 am ವೇಳೆಗೆ ಟೋಕಿಯೋ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ 51ನೇ ಸ್ಥಾನಕ್ಕೆ ಕುಸಿದಿತ್ತು. ಒಂದು ಬೆಳ್ಳಿ ಪದಕ ಮಾತ್ರ ಭಾರತದ ಖಾತೆಯಲ್ಲಿತ್ತು. ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಚೀನಾ 19 ಬಂಗಾರ, 11 ಬೆಳ್ಳಿ ಮತ್ತು 11 ಕಂಚಿನ ಪದಕಗಳನ್ನು ಗೆದ್ದಿತ್ತು. ದ್ವಿತೀಯ ಸ್ಥಾನದಲ್ಲಿದ್ದ ಆತಿಥೇಯ ಜಪಾನ್ 17 ಬಂಗಾರ, 4 ಬೆಳ್ಳಿ, 7 ಕಂಚಿನ ಪದಕಗಳನ್ನು ಗೆದ್ದಿತ್ತು. ತೃತೀಯ ಸ್ಥಾನದಲ್ಲಿದ್ದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ 16 ಚಿನ್ನದ ಪದಕ, 17 ಬೆಳ್ಳಿ ಪದಕ ಮತ್ತು 11 ಕಂಚಿನ ಪದಕಗಳನ್ನು ಗೆದ್ದಿತ್ತು. ಕೆಳಗಿನ ಸ್ಥಾನಗಳಲ್ಲಿ ರಷ್ಯಾ ಒಲಿಂಪಿಕ್ ಕಮಿಟಿ, ಆಸ್ಟ್ರೇಲಿಯಾ ಮತ್ತು ಗ್ರೇಟ್ ಬ್ರಿಟನ್ ದೇಶಗಳು ಇದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications