ಫ್ಯಾರಾಲಿಂಪಿಕ್ಸ್: ಪದಕ ಗೆದ್ದ ನಿಶಾದ್, ವಿನೋದ್ ಹಿಂದಿನ ಸ್ಪೂರ್ತಿಯ ಕಥೆ!

ಟೋಕಿಯೋ, ಆಗಸ್ಟ್ 29: ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ನಿಶಾದ್ ಕುಮಾರ್ ಮತ್ತು ವಿನೋದ್ ಕುಮಾರ್ ಅಥ್ಲೆಟಿಕ್ಸ್ ನಲ್ಲಿ ಪದಕ ಗೆಲ್ಲುವ ಮೂಲಕ ಇಡೀ ದೇಶ ಹೆಮ್ಮೆ ಪಡುವಂತಾ ಸಾಧನೆ ಮಾಡಿದ್ದಾರೆ. ಪುರುಷರ ಟಿ47 ಹೈ ಜಂಪ್ ಸ್ಪರ್ಧೆಯಲ್ಲಿ ನಿಶಾದ್ ಕುಮಾರ್ ಬೆಳ್ಳಿ ಗೆದ್ದರೆ, ಎಫ್ 52 ಡಿಸ್ಕಸ್ ಎಸೆತದಲ್ಲಿ ವಿನೋದ್ ಕುಮಾರ್ ಕಂಚಿನ ಪದಕ ಗೆದ್ದು ಮಿಂಚಿದ್ದಾರೆ. ಈ ಇಬ್ಬರು ಆಟಗಾರರು ಕೂಡ ಏಷ್ಯನ್ ದಾಖಲೆ ಮುರಿಯುವ ಮೂಲಕ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಈ ಕ್ರೀಡಾಪಟುಗಳ ಸಾಧನೆಯನ್ನು ಭಾರತ ಕೊಂಡಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಸಾಕಷ್ಟು ಗಣ್ಯರು ಹಾಗೂ ಕ್ರೀಡಾಪಟುಗಳು ಈ ಇಬ್ಬರ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಈ ಇಬ್ಬರು ಕ್ರೀಡಾಪಟುಗಳ ಸಾಧನೆಯ ಹಿಂದೆ ಸಾಕಷ್ಟು ಸವಾಲುಗಳ ಶಿಖರವೇ ಎದುರಾಗಿ ನಿಂತಿತ್ತು. ಅವುಗಳನ್ನು ಮೀರಿ ಇಂದು ವಿಶ್ವಮಟ್ಟದಲ್ಲಿ ಈ ಕ್ರೀಡಾಪಟುಗಳು ಮಿಂಚಿದ್ದಾರೆ.
ಕಾರು ಅಪಘಾತದಲ್ಲಿ ಕೈ ಕಳೆದುಕೊಂಡಿದ್ದ ನಿಶಾದ್: 21ರ ಹರೆಯದ ಯುವಕ ನಿಶಾದ್ ಹಿಮಾಚಲ ಪ್ರವೇಶದ ಸಣ್ಣ ಊರು ಉನಾದವರು. ತಮ್ಮ ಎಂಟನೆಯ ವಯಸ್ಸಿನಲ್ಲಿ ಕಾರು ಅಪಘಾತದಲ್ಲಿ ನಿಶಾದ್ ತಮ್ಮ ಬಲಗೈಯನ್ನು ಕಳೆದುಕೊಂಡರು. ಆದರೆ ಛಲದಿಂದ ಸವಾಲನ್ನು ಎದುರಿಸಿದ ನಿಶಾದ್ ಕ್ರೀಡಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಎಂಟನೆಯ ವಯಸ್ಸಿನಲ್ಲಿ ಆರಂಭವಾದ ಅವರ ಹೋರಾಟವು ಈಗ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಹಂತಕ್ಕೆ ತಲುಪಿದೆ.
ಈ ವರ್ಷದ ಆರಂಭದಲ್ಲಿ ನಿಶಾದ್ ಬೆಂಗಳೂರಿನ ಸಾಯಿ ಕೇಂದ್ರದಲ್ಲಿ ಪ್ಯಾರಾಲಿಂಪಿಕ್ಸ್‌ಗೆ ತರಬೇತಿ ಪಡೆಯುತ್ತಿದ್ದಾಗ ಕೊರೊನಾವೈರಸ್‌ಗೆ ತುತ್ತಾಗಿದ್ದರು. ಈ ಸವಾಲನ್ನು ಕೂಡ ದಿಟ್ಟವಾಗಿ ಎದುರಿಸಿದ ನಿಶಾದ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಪದಕ ಗೆದ್ದಿದ್ದಾರೆ. ನಿಶಾದ್ ಈ ವರ್ಷ ದುಬೈನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರು 2009 ರಿಂದ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಸೇನೆಯಲ್ಲಿದ್ದು ದೇಶ ಸೇವೆ ಮಾಡುವ ಕನಸು ಕಂಡಿದ್ದ ವಿನೋದ್ ಕುಮಾರ್: 42 ವರ್ಷದ ವಿನೋದ್ ಕುಮಾರ್ 30 ವರ್ಷಗಳ ನಂತರ ಕ್ರೀಡಾ ಜಗತ್ತಿಗೆ ಪ್ರವೇಶಿಸಿದ ಕ್ರೀಡಾಪಟು. ಅವರ ತಂದೆ ಬಿಎಸ್ಎಫ್ ಯೋಧನಾಗಿ ದೇಶಸೇವೆಯನ್ನು ಮಾಡಿದವರು. 1971 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಿನೋದ್ ಕುಮಾರ್ ತಂದೆ ಸೈನಿಕರಾಗಿ ಹೋರಾಡಿದ್ದರು. ಹೀಗಾಗಿ ಇದೇ ಸ್ಪೂರ್ತಿಯಲ್ಲಿ ಸೇನೆಗೆ ಸೇರುವ ಕನಸು ಕಂಡಿದ್ದರು ವಿನೋದ್ ಕುಮಾರ್. ತಾನು ಕೂಡ ಅದೇ ರೀತಿಯಲ್ಲಿ ದೇಶ ಸೇವೆ ಮಾಡಬೇಕೆಂದು ವಿನೋದ್ ಕುಮಾರ್ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯನ್ನು ಸೇರಿಕೊಂಡಿದ್ದರು. ಆದರೆ ಲೇಹ್‌ನಲ್ಲಿ ತರಬೇತಿಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ವಿನೋದ್ ಕುಮಾರ್ ಎತ್ತರದಿಂದ ಕೆಳಕ್ಕೆ ಬಿದ್ದಿದ್ದರು. ಈ ಅವಘಡದಿಂದಾಗಿ ದಶಕಗಳ ಕಾಲ ವಿನೋದ್ ಕುಮಾರ್ ಹಾಸಿಗೆ ಹಿಡಿದಿದ್ದರು. ಈ ಸಂದರ್ಭದಲ್ಲಿಯೇ ವಿನೋದ್ ಹೆತ್ತವರನ್ನು ಕೂಡ ಕಳೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications