ರೆಸ್ಲಿಂಗ್‌ನಲ್ಲಿ ಭಾರತದ ಯುವ ಮಹಿಳಾ ಕುಸ್ತಿಪಟು ಅಂತಿಮ್ ಪಂಘಲ್ ಹೊಸ ಇತಿಹಾಸವೊಂದನ್ನು ಬರೆದಿದ್ದಾರೆ. ಅಂಡರ್ 20 ರೆಸ್ಲಿಂಗ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿರುವ ಅಂತಿಮ್ ಪಂಘಾಲ್ ಅಂಡರ್ 20 ವಿಭಾಗದಲ್ಲಿ ವಿಶ್ವಮಟ್ಟದ ಎರಡು ಟೈಟಲ್‌ಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿ ಪಟು ಎನಿಸಿಕೊಂಡಿದ್ದಾರೆ.
U20 ರೆಸ್ಲಿಂಗ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿ ಪಟುಗಳು ಅಮೋಘ ಪ್ರದರ್ಶನ ನೀಡಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಏಳು ಕುಸ್ತಿಪಟುಗಳು ಪದಕವನ್ನು ಗೆದ್ದುಕೊಂಡಿದ್ದು ಮೂರು ಚಿನ್ನದ ಪದಕ ಸೇರಿದಂತೆ ಭಾರತದ ಅಂಡರ್ 20 ಕುಸ್ತಿಪಟುಗಳು 7 ಪದಕಗಳನ್ನು ತನ್ನದಾಗಿಸಿಕೊಂಡಿದ್ದು ಭಾರತ ಈ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್‌ಶಿಪ್ ಗೆದ್ದುಕೊಂಡಿದೆ.

ಆಗಸ್ಟ್ 18 ಶುಕ್ರವಾರದಂದು ನಡೆದ 53 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಅಂತಿಮ್ ಪಂಘಾಲ್ ಯುಕ್ರೇನ್‌ನ ಮರಿಯಾ ಯೆಪ್ರೆಮೋವಾ ಅವರನ್ನು 4-0 ಅಂತರದಿಂದ ಮಣಿಸಿದರು. ಈ ಮೂಲಕ 53 ಕೆಜಿ ವಿಭಾಗದ ಪಟ್ಟವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ ಭಾರತದ ಯುವ ರೆಸ್ಲರ್.
ಪಂಘಾಲ್ ಮಾತ್ರವಲ್ಲದೆ 62 ಕೆಜಿ ವಿಭಾಗದಲ್ಲಿ ಸವಿತಾ ಕೂಡ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತೀಯ ಮಹಿಳಾ ತಂಡವು ಕ್ರೀಡಾ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಂಡ ಪ್ರಶಸ್ತಿಯನ್ನು ಗೆದ್ದಿತು. ಇದಕ್ಕೂ ಮುನ್ನ ಗುರುವಾರ ಪ್ರಿಯಾ ಮಲಿಕ್ 76 ಕೆಜಿ ವಿಭಾಗದಲ್ಲಿ ಟೈಟಲ್ ಗೆದ್ದುಕೊಂಡಿದ್ದರು.
ಚಿನ್ನದ ಪದಕ ಹೊರತುಪಡಿಸಿ ಆಂತಿಮ್ ಕುಂದು 65 ಕೆಜಿ ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ 57 ಕೆಜಿ ವಿಭಾಗದಲ್ಲಿ ರೀನಾ, 68 ಕೆಜಿ ವಿಭಾಗದಲ್ಲಿ ಅರ್ಜು ಮತ್ತು 72 ಕೆಜಿ ವಿಭಾಗದಲ್ಲಿ ಹರ್ಷಿತಾ ಸೇರಿ ಒಟ್ಟು ಮೂರು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ಚಾಂಪಿಯನ್‌ಶಿಪ್ ಗೆದ್ದುಕೊಂಡಿದೆ.
ಹರಿಯಾಣದ ಹಿಸಾರ್‌ನ 19 ವರ್ಷದ ಯುವತಿ ಅಂತಿಮ್ ಪಂಘಾಲ್ ಮುಂಬರುವ ಎರಡು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ. ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ 53 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅಂತಿಮ್ ಪಂಘಾಲ್ ತನ್ನ ಪ್ರಚಂಡ ಚಾಣಾಕ್ಷತೆ ಮತ್ತು ಶಕ್ತಿಯನ್ನು ಮಹತ್ವದ ವೇದಿಕೆಯಲ್ಲಿ ಪ್ರದರ್ಶಿಸಿ ಗಮನಸೆಳೆದಿದ್ದಾರೆ.
ಅಂತಿಮ್ ಪಂಘಾಲ್ ಅವರು ಈ ಸಂಪೂರ್ಣ ಟೂರ್ನಿಯಲ್ಲಿ ಆಕ್ರಮಣಕಾರಿಯಾಗಿ ಹಾಗೂ ಅಧಿಕಾರಯುತವಾಗಿ ಹೋರಾಡಿದ್ದಾರೆ. ಇದಕ್ಕೆ ಸಂಪೂರ್ಣ ಟೂರ್ನಿಯಲ್ಲಿ ಕೇವಲ ಎರಡು ಅಂಕಗಳನ್ನು ಮಾತ್ರವೇ ತನ್ನ ಎದುರಾಳಿಗಳಿಗೆ ಬಿಟ್ಟುಕೊಟ್ಟಿರುವುದು ಸಾಕ್ಷಿ. ಈ ಮೂಲಕ ಈ ವಿಭಾಗದಲ್ಲಿ ತಾನು ಭವಿಷ್ಯದ ಭರವಸೆ ಎನ್ನುವುದನ್ನು ಮತ್ತೊಮ್ಮೆ ಸಾರಿ ಹೇಳಿದ್ದಾರೆ.
ಇನ್ನು ಏಷ್ಯನ್ ಗೇಮ್ಸ್ ಟ್ರಯಲ್ಸ್‌ಗೆ ಹಿರಿಯ ರೆಸ್ಲರ್ ವಿನೇಶ್ ಫೋಗಟ್ ಸೇರಿದಂತೆ ಕೆಲ ರೆಸ್ಲರ್‌ಗಳಿಗೆ ನೇರ ಪ್ರವೇಶಕ್ಕೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಅಂತಿಮ್ ಪಂಘಾಲ್ ಗಮನಸೆಳೆದಿದ್ದರು. ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್ ಅವರನ್ನು ಸೋಲಿಸಬಹುದು ಆಕೆಗೆ ನೇರ ಅವಕಾಶ ನೀಡಬಾರದು ಎಂದು ಬಲಿವಾಗಿ ಪ್ರತಿಪಾದಿಸಿದ್ದ ಅಂತಿಮ್ ತನ್ನ ಮಾತು ಅತಿಯಾದ ಆತ್ಮವಿಶ್ವಾಸ ಮಾತಲ್ಲ ಎನ್ನುವುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ.
ಪಂಘಾಲ್ ಕಳೆದ ವರ್ಷ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಜಯಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ರೆಸ್ಲರ್ ಎನಿಸಿಕೊಂಡಿದ್ದರು. ಇನ್ನು ಈಗಾಗಲೇ ಸೀನಿಯರ್ ವಿಭಾಗದಲ್ಲಿಯೂ ಗಮನಸೆಳೆಯುವ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಎದುರಾಳಿ ಯೆಫ್ರೆಮೊವಾಗೆ ಒಂದು ಸಣ್ಣ ಅವಕಾಶ ಕೂಡ ನೀಡಲಿಲ್ಲ. ತನ್ ಅದ್ಭುತ ಏಕಾಗ್ರಥೆ ಹಾಗೂ ಸಾಮರ್ಥ್ಯದಿಂದ ಎದುರಾಳಿಯನ್ನು ಕೆಡವಿದ್ದಾರೆ.