
ಟೋಕಿಯೋ: ಉಗಾಂಡದ ವೇಟ್ ಲಿಫ್ಟರ್ ಜೂಲಿಯಸ್ ಸೆಕಿಟೋಲೆಕೊ ಟೋಕಿಯೋ ಒಲಿಂಪಿಕ್ಸ್ ಅಭ್ಯಾಸ ಶಿಬಿರದಿಂದ ಕಾಣೆಯಾಗಿರುವುದಾಗಿ ವರದಿಯಾಗಿದೆ. ಜಪಾನ್ ಒಲಿಂಪಿಕ್ ಕಮಿಟಿ ಈ ವಿಚಾರವನ್ನು ಖಾತರಿಪಡಿಸಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಒಂದು ವಾರ ಬಾಕಿಯಿರುವಾಗಲೇ ಈ ಸಂಗತಿ ನಡೆದಿರುವುದು ಆಯೋಜಕರಿಗೆ ತಲೆನೋವು ತಂದಿದೆ.
ಸ್ಥಳೀಯ ಅಧಿಕಾರಿಗಳು ಜೂಲಿಯಸ್ ಸೆಕಿಟೋಲೆಕೊ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪಶ್ಚಿಮ ಜಪಾನ್‌ನಲ್ಲಿದ್ದ 9 ಮಂದಿಯ ಉಗಾಂಡ ತಂಡದಲ್ಲಿ ಜೂಲಿಯಸ್ ಕೂಡ ಇದ್ದರು. ಇವರೆಲ್ಲ ಒಸಾಕಾದ ಇಜುಮಿಸಾನೊ ಎಂಬಲ್ಲಿ ಅಭ್ಯಾಸ ನಡೆಸುತ್ತಿದ್ದರು.
ಶುಕ್ರವಾರ ತಂಡದ ಸದಸ್ಯರೆಲ್ಲ ಕೋವಿಡ್ ಎಂಜಲು ಪರೀಕ್ಷೆಗೆ ಮಾದರಿ ನೀಡುವಾಗ 20ರ ಹರೆಯದ ಸೆಕಿಟೋಲೆಕೊ ತಪ್ಪಿಸಿಕೊಂಡಿರುವುದು ತಿಳಿದು ಬಂದಿದೆ. ಅಲ್ಲಿನ ಅಧಿಕಾರಿಗಳ ಪ್ರಕಾರ ಸೆಕಿಟೋಲೆಕೊ ಅವರಿದ್ದ ಹೋಟೆಲ್ ರೂಮ್ ಖಾಲಿಯಾಗಿತ್ತು.
ಬಾಕ್ಸರ್, ಸ್ವಿಮ್ಮರ್, ವೇಟ್ ಲಿಫ್ಟರ್‌ಗಳು ಮತ್ತು ಕೋಚ್‌ಗಳಿದ್ದ ಉಗಾಂಡ ತಂಡ ಕಳೆದ ಜೂನ್‌ನಿಂದಲೂ ಇಜುಮಿಸಾನೊದಲ್ಲಿ ಒಲಿಂಪಿಕ್ಸ್‌ಗಾಗಿ ಅಭ್ಯಾಸ ನಡೆಸುತ್ತಿತ್ತು. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.