ಅಂತಾರಾಷ್ಟ್ರೀಯ ಕುಸ್ತಿ ಆಡಳಿತ ಮಂಡಳಿ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಭಾರತೀಯ ರೆಸ್ಲಿಂಗ್ ಸಂಸ್ಥೆ(WFI)ಗೆ ಭಾರೀ ಭಾರೀ ಆಘಾತ ನೀಡಿದೆ. ಚುನಾವಣೆಗಳನ್ನು ನಡೆಸಲು ಫೆಡರೇಶನ್‌ಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದರೂ ಚಿನಾವಣೆ ನಡೆಸಲು ಭಾರತ ಕುಸ್ತಿ ಫೆಡರೇಶನ್ ವಿಫಲವಾದ ಹಿನ್ನೆಲೆಯಲ್ಲಿ ಸದಸ್ಯತ್ವವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆ.
ಈಗಾಗಲೇ ಡಬ್ಲ್ಯುಎಫ್‌ಐ ವಿವಾದಗಳ ಸರಣಿಯಲ್ಲಿ ಸಿಲುಕಿಕೊಂಡಿದ್ದು ಚುನಾವಣೆಯನ್ನು ಕೂಡ ನಿಗದಿತ ಸಮಯದಲ್ಲಿ ನಡೆಸಲು ವಿಫಲವಾಗಿದೆ. ಭಾರತದ ಕುಸ್ತಿ ಆಡಳಿತ ಮಂಡಳಿ ಕಳೆದ ಜೂನ್ ತಿಂಗಳಿನಲ್ಲಿ ಚುನಾವಣೆಗಳನ್ನು ನಡೆಸಬೇಕಾಗಿತ್ತು. ಆದರೆ ಭಾರತೀಯ ಕುಸ್ತಿಪಟುಗಳ ಸರಣಿ ಪ್ರತಿಭಟನೆ ಮತ್ತು ವಿವಿಧ ರಾಜ್ಯ ಘಟಕಗಳ ಕಾನೂನು ಹೋರಾಟಗಳ ಕಾರಣದಿಂದಾಗಿ ಚುನಾವಣೆಗಳನ್ನು ಪದೇ ಪದೇ ಮುಂದೂಡಲಾಗಿದೆ.

ವಿಶ್ವ ಕುಸ್ತಿ ಆಡಳಿತ ಮಂಡಳಿಯಾಗಿರುವ UWW ತನ್ನ ಚುನಾವಣೆಗಳನ್ನು ಸಮಯಕ್ಕೆ ನಡೆಸದಿದ್ದಕ್ಕಾಗಿ WFIಯನ್ನು ಅಮಾನತುಗೊಳಿಸಿದೆ. ಈ ಬೆಳವಣಿಗೆಯಿಂದಾಗಿ ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕುಸ್ತಿಪಡುಗಳಿಗೆ ಭಾರತೀಯ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲದಂತೆ ಮಾಡಿದೆ.
ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಚುನಾವಣೆ ನಡೆಸಲು 45 ದಿನಗಳ ಗಡುವನ್ನು ಯುಡಬ್ಲ್ಯುಡಬ್ಲ್ಯು ನೀಡಿದ್ದರೂ ಈ ಅವಧಿಯಲ್ಲಿ ಚುನಾವಣೆ ನಡೆಸಲು ಭೂಪೇಂದರ್ ಸಿಂಗ್ ಬಜ್ವಾ ನೇತೃತ್ವದ ತಾತ್ಕಾಲಿಕ ಸಮಿತಿ ವಿಫಲವಾಗಿದೆ. ಹೀಗಾಗಿ ಕಾರಣ ಸೆಪ್ಟೆಂಬರ್ 16ರಿಂದ ಆರಂಭವಾಗಲಿರುವ ಒಲಿಂಪಿಕ್ ಅರ್ಹತಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕುಸ್ತಿಪಟುಗಳು 'ತಟಸ್ಥ ಅಥ್ಲೀಟ್‌ಗಳಾಗಿ' ಸ್ಪರ್ಧಿಸಬೇಕಾಗುತ್ತದೆ.
ಡಬ್ಲ್ಯುಎಫ್‌ಐ ಆಡಳಿತ ಮಂಡಳಿಯ 15 ಸ್ಥಾನಗಳಿಗೆ ಆಗಸ್ಟ್ 12 ರಂದು ಚುನಾವಣೆ ನಡೆಯಬೇಕಿತ್ತು. ನವದೆಹಲಿಯ ಒಲಿಂಪಿಕ್ ಭವನದಲ್ಲಿ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ನಿರ್ಗಮಿತ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಸೇರಿದಂತೆ ನಾಲ್ವರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಚಂಡೀಗಢ ಕುಸ್ತಿ ಸಂಸ್ಥೆಯ ದರ್ಶನ್ ಲಾಲ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾಮನಿರ್ದೇಶನಗೊಂಡರೆ, ಉತ್ತರಾಖಂಡದ ಎಸ್ಪಿ ದೇಸ್ವಾಲ್ ಖಜಾಂಚಿ ಸ್ಥಾನಕ್ಕೆ ಬ್ರಿಜ್ ಭೂಷಣ್ ಬಳಗದಿಂದ ನಾಮನಿರ್ದೇಶನಗೊಂಡರು.
ಡಬ್ಲ್ಯುಎಫ್‌ಐನ ದಿನನಿತ್ಯದ ವ್ಯವಹಾರಗಳನ್ನು ಪ್ರಸ್ತುತ ಭಾರತೀಯ ಒಲಿಂಪಿಕ್ ಅಸೋಸಿಯೇಷನ್-ರಚಿತವಾದ ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದ ತಾತ್ಕಾಲಿಕ ಸಮಿತಿಯು ನಿರ್ವಹಿಸುತ್ತಿದೆ.