ಭಾರತದಲ್ಲಿ ಕುಸ್ತಿ ಕಲೆಗೆ ಪ್ರಾಚೀನ ಕಾಲದಿಂದಲೂ ವಿಶೇಷ ಸ್ಥಾನಮಾನ ನೀಡಲಾಗಿದೆ. ಪುರುಷರಿಗಷ್ಟೆ ಸೀಮಿತವಾಗಿದ್ದ ಕುಸ್ತಿ ಕಾಲನಂತರ ಮಹಿಳೆಯರನ್ನು ಆಕರ್ಷಿಸಿತ್ತು. ಹೀಗಾಗಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪುರುಷರು ಮತ್ತು ಮಹಿಳಾ ಕುಸ್ತಿ ಪಟುಗಳು ಮಹತ್ತರವಾದ ಸಾಧನೆ ಗೈದಿದ್ದಾರೆ.
ಆದರೇ ಕಳೆದ ವರ್ಷ ಭಾರತದ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಗಿಂಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಬಳಿಕ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ದೇಶದ ಮೂವರು ಅಗ್ರ ಕುಸ್ತಿಪಟುಗಳಲ್ಲಿ ವಿನೇಶ್ ಫೋಗಟ್ ಕೂಡ ಸೇರಿದ್ದರು. ಈ ಮೂವರ ಜೊತೆಗೆ ನಿರಂತರವಾಗಿ ದೇಶದ ಹಲವು ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆಸಿ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಜೊತೆಗೆ ದೇಶದ ವಿವಿಧೆಡೆಯಿಂದ ಕೂಡ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇಷ್ಟೆಲ್ಲ ಬೆಳವಣಿಗೆ ಆದ ನಂತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಜರಂಗ ಪುನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಗೆ ಅರ್ಹತೆ ಪಡೆಯುವುದು ಸವಾಲಾಗಿತ್ತು. ಆದರೇ ಇದೀಗ ಶನಿವಾರ ಕಿರ್ಗಿಸ್ತಾನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಏಷ್ಯಾನ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನ ಸೆಮಿಫೈನಲ್‌ನಲ್ಲಿ ಪ್ರಬಲ ಪ್ರದರ್ಶನ ನೀಡುವ ಮೂಲಕ ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ 2024ರ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದಲ್ಲಿ ಕಜಕಿಸ್ತಾನದ ಲಾರಾ ಗಣಿಕ್ಯಾಜಿ ಅವರನ್ನು ಸೋಲಿಸುವ ಮೂಲಕ ವಿನೇಶ್ ಈ ಸಾಧನೆ ಮಾಡಿದ್ದಾರೆ. ಯಾವುದೇ ಅಂಕಗಳನ್ನು ಬಿಟ್ಟುಕೊಡದ ವಿನೇಶ್ 10-0 ರಿಂದ ಲಾರಾ ಗಣಿಕ್ಯಾಜಿ ಅವರನ್ನು ಮಣಿಸಿದ್ದಾರೆ. ಈ ಟೂರ್ನಿ ಆರಂಭಿಕ ಪಂದ್ಯದಲ್ಲಿ ಕೊರಿಯಾದ ಮಿರಾನ್ ಚಿಯೋನ್ ವಿರುದ್ಧ ಕೇವಲ 39 ಸೆಕೆಂಡುಗಳಲ್ಲಿ ವಿನೇಶ್ ಭರ್ಜರಿ ಜಯಗಳಿಸಿದ್ದರು. ಬಳಿಕ ಮುಂದಿನ ಪಂದ್ಯದಲ್ಲಿ ಕಾಂಬೋಡಿಯಾದ ಎಸ್ಮಾನಂಗ್ ಡಿಟ್ ಅವರನ್ನು 67 ಸೆಕೆಂಡುಗಳಲ್ಲಿ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದಿದ್ದರು. ಈಗ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ದೇಶದ ಕೀರ್ತಿಯನ್ನು ಮತ್ತೊಮ್ಮೆ ಎತ್ತಿ ಹಿಡಿಯಲು ಒಲಿಂಪಿಕ್ಸ್ ಕ್ರೀಡ್‌ಕೂಟಕ್ಕೆ ಸಜ್ಜಾಗಿದ್ದಾರೆ.
ಕುಸ್ತಿಯಲ್ಲಿ ವಿನೇಶ್ ಫೋಗಟ್ ಸಾಧನೆಗಳು : ಭಾರತದ ಅತ್ಯುತ್ತಮ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾದ 29 ವರ್ಷದ ವಿನೇಶ್ ಫೋಗಟ್ ಅವರು ಹಲವು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದಿರುವ ವಿನೇಶ್, ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ, ಏಷ್ಯನ್ ಗೇಮ್ಸ್‌ನಲ್ಲಿ ಒಂದು ಚಿನ್ನದ ಪದಕ ಮತ್ತು 2021ರಲ್ಲಿ ಏಷ್ಯನ್ ಚಾಂಪಿಯನ್‌ಯಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಟಿದ್ದಾರೆ.