2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿದ ಎಂಟು ಪಂದ್ಯಗಳನ್ನು ಗೆದ್ದು ಬೀಗಿದೆ ಮತ್ತು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಭಾನುವಾರ ಕೋಲ್ಕತ್ತಾದಲ್ಲಿ ನಡೆದ 37ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ 243 ರನ್‌ಗಳ ಅಂತರದ ಗೆಲುವು ಸಾಧಿಸಿತು. ಇದೇ ವೇಳೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಮೋಘ ಶತಕಬಾರಿಸಿ ತಮ್ಮ 35ನೇ ಜನ್ಮದಿನವನ್ನು ಸ್ಮರಣೀಯವಾಗಿಸಿಕೊಂಡರು.
ಇದೇ ವೇಳೆ ಮಾಜಿ ಶ್ರೇಷ್ಠ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ, ಹರಿಣ ಪಡೆ ವಿರುದ್ಧ ತಮ್ಮ 49ನೇ ಏಕದಿನ ಶತಕವನ್ನು ಸಿಡಿಸಿದರು.

ಇದೀಗ ಭಾರತದ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮರುದಿನವೇ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಏಕೆಂದರೆ, ಭಾರತ ತಂಡದ ಉಳಿದ ಆಟಗಾರರಿಗಿಂತ ಮೊದಲು ತಮ್ಮ ಮುಂದಿನ ಪಂದ್ಯಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಒಟ್ಟು 543 ರನ್‌ಗಳನ್ನು ಕಲೆಹಾಕಿದ್ದಾರೆ ಮತ್ತು ಇದು ಈ ಆವೃತ್ತಿಯ ಪಂದ್ಯಾವಳಿಯಲ್ಲಿ 108.60ರ ಸರಾಸರಿ ಹೊಂದಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಎಂಟು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಅಜೇಯರಾಗುಳಿದಿದ್ದಾರೆ.
35 ವರ್ಷದ ಇನ್-ಫಾರ್ಮ್ ವಿರಾಟ್ ಕೊಹ್ಲಿ ಅವರು ಕೋಲ್ಕತ್ತಾದಿಂದ ಎಕಾನಮಿ ಕ್ಲಾಸ್ ವಿಮಾನದಲ್ಲಿ ನೇರವಾಗಿ ಬೆಂಗಳೂರಿಗೆ ಬಂದಿಳಿದಿರುವುದನ್ನು ನೋಡಿದ ನಂತರ, ಅವರ ಅಭಿಮಾನಿಗಳು ಭಾರೀ ಖುಷಿಪಟ್ಟಿದ್ದಾರೆ. ಬೆಂಗಳೂರು ವಿರಾಟ್ ಕೊಹ್ಲಿಯ ಎರಡನೇ ತವರು ಮನೆ ಇದ್ದಂತೆ.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ವಿರಾಟ್ ಕೊಹ್ಲಿ, ಕರ್ನಾಟಕದಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೇಸ್ ಮಾಸ್ಟರ್, ಕಿಂಗ್ ಕೊಹ್ಲಿ ಮಾತ್ರ ಕಾಣಿಸಿಕೊಂಡಿದ್ದು, ಪೊಲೀಸ್ ಭದ್ರತೆಯ ನಡುವೆ ವಿಮಾನನಿಲ್ದಾಣದಿಂದ ಹೋಟೆಲ್ ಕಡೆ ಸಾಗಿದರು. ಭಾರತ ತಂಡದ ಉಳಿದ ಆಟಗಾರರು ಸೋಮವಾರ ಸಂಜೆಯ ಹೊತ್ತಿಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಭಾರತ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ತನ್ನ ಮುಂದಿನ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಭಾನುವಾರ, ನವೆಂಬರ್ 12ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.
ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಲು ಯಶಸ್ವಿಯಾದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಇದೇ ವೇಳೆ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.