ಸದ್ಯ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸಂಪೂರ್ಣ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿರುವ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ತನ್ನ ಎರಡನೇ ಮಗು "ಅಕಾಯ್'ನನ್ನು ಫೆಬ್ರವರಿ 15ರಂದು ಸ್ವಾಗತಿಸಿದರು.

ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಪ್ರಸ್ತುತ ಇಂಗ್ಲೆಂಡ್‌ನ ಲಂಡನ್‌ನಲ್ಲಿದ್ದಾರೆ ಮತ್ತು ಇತ್ತೀಚೆಗೆ ಮಗಳು ವಾಮಿಕಾ ಅವರೊಂದಿಗೆ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತ ಸ್ಟಾರ್ ಕ್ರಿಕೆಟಿಗ ತನ್ನ ಮಗಳೊಂದಿಗೆ ಇರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನದ ನಂತರ ಲಂಡನ್‌ನಲ್ಲಿ ಅವರು ತಮ್ಮ ಮೊದಲ ಗಂಡು ಮಗುವಿನೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ.
ವೈರಲ್ ಫೋಟೋದಲ್ಲಿ 35 ವರ್ಷದ ವಿರಾಟ್ ಕೊಹ್ಲಿ ಕ್ಯಾಪ್ ಧರಿಸಿರುವುದನ್ನು ಕಾಣಬಹುದು. ತಂದೆ-ಮಗಳು ಇಬ್ಬರೂ ಊಟವನ್ನು ಸೇವಿಸುತ್ತಿರುವಾಗ ಲಂಡನ್‌ನ ಚಳಿಗಾಲದಲ್ಲಿ ಬೆಚ್ಚಗಾಗಲು ವಾಮಿಕಾ ಸ್ವೆಟರ್ ಧರಿಸಿರುವುದನ್ನು ನೋಡಬಹುದು.
ಜನವರಿ 2021ರಲ್ಲಿ ತನ್ನ ಮಗಳು ವಾಮಿಕಾ ಹುಟ್ಟಿದಾಗಿನಿಂದ, ವಿರಾಟ್ ಕೊಹ್ಲಿ ತನ್ನ ಕುಟುಂಬಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ ಮತ್ತು ತನ್ನ ಕುಟುಂಬದ ಜೊತೆ ಸಮಯ ಕಳೆಯಲು ನಿಯಮಿತ ವಿರಾಮಗಳನ್ನು ತೆಗೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು 2020-21ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಕೊನೆಯ ಮೂರು ಟೆಸ್ಟ್ ಪಂದ್ಯಗಳನ್ನು ವಾಮಿಕಾ ಜನನದಿಂದಾಗಿ ತವರಿಗೆ ಮರಳಿದ್ದರು.
ದೆಹಲಿ ಮೂಲದ ಕ್ರಿಕೆಟಿಗ ತನ್ನ ಗಂಡು ಮಗುವಿನ ಜನನದ ಸಮಯದಲ್ಲಿ ತನ್ನ ಕುಟುಂಬದೊಂದಿಗೆ ಇರಲು ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದಾರೆ.
ತಂಡದಿಂದ ಹೊರಗಿದ್ದರೂ, ರಾಂಚಿಯಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದ ನಂತರ, ವಿರಾಟ್ ಕೊಹ್ಲಿ ಸರಣಿ ಗೆಲುವಿಗಾಗಿ ಭಾರತ ತಂಡವನ್ನು ಅಭಿನಂದಿಸಿದರು. ಹಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ತಮ್ಮ ಅದ್ಭುತ ಆಟ ಮತ್ತು ನಿರ್ಣಯಕ್ಕಾಗಿ ಮಾಜಿ ನಾಯಕ ಶ್ಲಾಘಿಸಿದರು.
"ಯೆಸ್, ನಮ್ಮ ಯುವ ತಂಡದಿಂದ ಅದ್ಭುತ ಸರಣಿ ಗೆಲುವು ಇದಾಗಿದೆ. ಧೈರ್ಯ, ದೃಢತೆ ಮತ್ತು ನಿರ್ಣಯವನ್ನು ತೋರಿಸಿದರು," ಎಂದು ವಿರಾಟ್ ಕೊಹ್ಲಿ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
192 ರನ್ ಬೆನ್ನಟ್ಟಿ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡ ಭಾರತ
ಗಮನಾರ್ಹವಾಗಿ, ಟೆಸ್ಟ್ ಸರಣಿಯನ್ನು ವಶಪಡಿಸಿಕೊಳ್ಳಲು ಭಾರತಕ್ಕೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 192 ರನ್‌ಗಳ ಗುರಿಯನ್ನು ನೀಡಲಾಯಿತು ಮತ್ತು 3ನೇ ದಿನದ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿತ್ತು.
ನಾಲ್ಕನೇ ದಿನದಾಟ ಆರಂಭಿಸಿದ ಆರಂಭಿಕರಾದ ರೋಹಿತ್ ಶರ್ಮಾ 81 ಎಸೆತಗಳಲ್ಲಿ 55 ರನ್ ಮತ್ತು ಯಶಸ್ವಿ ಜೈಸ್ವಾಲ್ 44 ಎಸೆತಗಳಲ್ಲಿ 37 ರನ್ ಗಳಿಸಿ ತಮ್ಮ ತಂಡಕ್ಕೆ ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನಿರ್ಮಿಸುವ ಮೂಲಕ ಉತ್ತಮ ಆರಂಭವನ್ನು ನೀಡಿದರು.
ಆದಾಗ್ಯೂ, ಉತ್ತಮ ಆರಂಭದ ನಂತರ ಭಾರತ 120 ರನ್‌ಗಳಿಗೆ ಅಗ್ರ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು ಮತ್ತು ಗೆಲುವಿಗೆ ಇನ್ನೂ 72 ರನ್‌ಗಳ ಅಗತ್ಯವಿತ್ತು.
ಈ ವೇಳೆ ಜೊತೆಗೂಡಿದ ಶುಭ್ಮನ್ ಗಿಲ್ 124 ಎಸೆತಗಳಲ್ಲಿ ಅಜೇಯ 52 ರನ್ ಮತ್ತು ಧ್ರುವ್ ಜುರೆಲ್ 77 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದ್ದಲ್ಲದೆ, ಮುರಿಯದ ಆರನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟದೊಂದಿಗೆ ತಮ್ಮ ತಂಡವನ್ನು ಗೆಲುವಿನ ಗಡಿ ತಲುಪಿಸಿದರು.
ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 90 ಮತ್ತು ಅಜೇಯ 39 ರನ್ ಗಳಿಸಿದ್ದಕ್ಕಾಗಿ ಧ್ರುವ್ ಜುರೆಲ್ ಅರ್ಹವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.