ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು 2023ರಲ್ಲಿ ವಿಶ್ವದ ಅತಿದೊಡ್ಡ ಸರ್ಚ್ ಇಂಜಿನ್ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಗೂಗಲ್ ಟ್ರೆಂಡ್ಸ್‌ನಿಂದ ಬಂದ ಮಾಹಿತಿಯ ಪ್ರಕಾರ, ವಿರಾಟ್ ಕೊಹ್ಲಿ ಏಷ್ಯಾದ ಕೆಲವು ಪ್ರಸಿದ್ಧ ವ್ಯಕ್ತಿಗಳನ್ನು ಮೀರಿಸಿದ್ದಾರೆ.
ಜೂನ್‌ನಲ್ಲಿ ಬಿಡುಗಡೆಯಾದ ಪಟ್ಟಿಯ ಪ್ರಕಾರ, ಕೊರಿಯನ್ ಪಾಪ್ ಗ್ರೂಪ್ BTS V 2023ರ ಮೊದಲಾರ್ಧದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಏಷ್ಯನ್ನರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಆದರೆ, ಭಾರತದ ಶ್ರೇಷ್ಠ ಕ್ರಿಕೆಟಿಗ ಬಲಗೈ ಬ್ಯಾಟರ್ ವಿರಾಟ್ ಕೊಹ್ಲಿ 2023ರಲ್ಲಿ ಇಲ್ಲಿಯವರೆಗೆ ಹೆಚ್ಚು ಗೂಗಲ್ ಹುಡುಕಾಟಗಳನ್ನು ಸ್ವೀಕರಿಸಿದ ವ್ಯಕ್ತಿಯಾಗಿ ಅವರನ್ನು ಮೀರಿಸಿದ್ದಾರೆ.

ಹೀಗಾಗಿ, ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಬಿಟಿಎಸ್ ಸದಸ್ಯರಾದ ಜಂಗ್‌ಕುಕ್ ಮತ್ತು ವಿ ಅವರನ್ನು ಹಿಂದಿಕ್ಕಿದ್ದಾರೆ.
ಅಲ್ಲದೆ, 34 ವರ್ಷದ ಕೊಹ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನೂ ಸಹ ಹಿಂದಿಕ್ಕಿದ್ದಾರೆ. ಕತ್ರಿನಾ ಕಳೆದ ವರ್ಷದಿಂದ ಗೂಗಲ್‌ನ ಪಟ್ಟಿಯ ಪ್ರಕಾರ "ಮೋಸ್ಟ್ ಸರ್ಚ್ಡ್ ಏಷ್ಯನ್ ವರ್ಲ್ಡ್‌ವೈಡ್ 2022' ಆಗಿದ್ದರು.
16ನೇ ಆವೃತ್ತಿಯ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಅವಿಸ್ಮರಣೀಯ ಅಭಿಯಾನ ಹೊಂದಿತ್ತು. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಕಳೆದ ಬಾರಿಯ ಚಾಂಪಿಯನ್ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿ ಎಂಟನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಿತು.
ಇದೇ ವೇಳೆ ಏಷ್ಯಾ ಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಸೂಪರ್ 4 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ತಮ್ಮ 47ನೇ ಶತಕ ಬಾರಿಸಿದರು.
ವಿರಾಟ್ ಕೊಹ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅಜೇಯ 122 ರನ್ ಗಳಿಸಿದರು. ಈ ಮೂಲಕ ಭಾರತ ತಂಡ 228 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿತು.
267 ಇನ್ನಿಂಗ್ಸ್‌ಗಳಲ್ಲಿ 13,000 ಏಕದಿನ ರನ್‌ಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡರು. ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡರು. 321 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮೀರಿಸಿದ್ದಾರೆ.
ವಿರಾಟ್ ಕೊಹ್ಲಿ ಈ ಬಾರಿಯ ಏಷ್ಯಾ ಕಪ್‌ನಲ್ಲಿ ಆಡಿದ ಐದು ಪಂದ್ಯಗಳಿಂದ 64.50ರ ಸರಾಸರಿ ಮತ್ತು 114.15ರ ಸ್ಟ್ರೈಕ್ ರೇಟ್‌ನಲ್ಲಿ 129 ರನ್ ಗಳಿಸಿದ್ದಾರೆ.
ಆದರೆ, ದಾಖಲೆ ವೀರ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಕಳಪೆಯಾಗಿ ಔಟಾದರು ಮತ್ತು ಸೂಪರ್ ಫೋರ್ ಹಂತದಲ್ಲಿ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಯುವ ಆಟಗಾರರಿಗಾಗಿ ವಿಶ್ರಾಂತಿ ಪಡೆದರು.
ಈ ಮಧ್ಯೆ, ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶವನ್ನು ಪಡೆಯಲಿಲ್ಲ. ಏಕೆಂದರೆ, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಭಾರತ ತಂಡ ಶ್ರೀಲಂಕಾ ತಂಡವನ್ನು ಕೇವಲ 50 ರನ್‌ಗಳ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಮಾಡಿತು.
ಅನಂತರ, ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಜೋಡಿ 6.1 ಓವರ್‌ಗಳಲ್ಲಿ ಭಾರತಕ್ಕೆ 10 ವಿಕೆಟ್‌ಗಳು ಉಳಿದಿರುವಂತೆಯೇ ಗೆಲುವಿನ ಗುರಿಯನ್ನು ಬೆನ್ನಟ್ಟಿದರು.