ಏಷ್ಯನ್ ಗೇಮ್ಸ್‌ನಿಂದ ಹಿಂದೆ ಸರಿದ ಚಿನ್ನದ ಹುಡುಗಿ ಮೀರಾಬಾಯಿ ಚಾನು

ನವದೆಹಲಿ, ಆಗಸ್ಟ್ 07: ಮುಂಬರುತ್ತಿರುವ ಏಷ್ಯಾ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಚಿನ್ನದ ಪದಕ ವಿಜೇತ ಮಹಿಳಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಹಿಂದೆ ಸರಿದಿದ್ದಾರೆ.
ತಾವು ಕ್ರೀಡಾಕೂಟಕ್ಕೆ ದೈಹಿಕವಾಗಿ ಸಜ್ಜಾಗಿರದ ಕಾರಣ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ವೇಟ್‌ಲಿಫ್ಟಿಂಗ್ ಫೆಡರೇಷನ್‌ಗೆ ಪತ್ರ ಬರೆದಿದ್ದಾರೆ.
ಏಷ್ಯನ್ ಕ್ರೀಡಾಕೂಟಕ್ಕೆ ಈಗಾಗಲೇ ಭಾರತದ ಅಥ್ಲೀಟ್‌ಗಳು ತಯಾರಿ ಪ್ರಾರಂಭಿಸಿದ್ದು, ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಅವರ ಅನುಪಸ್ಥಿತಿಯು ಭಾರತಕ್ಕೆ ಅಲ್ಪ ಹಿನ್ನಡೆ ಮಾಡಲಿದೆ.
ಬೆನ್ನು ನೋವಿನಿಂದ ಬಳಲುತ್ತಿರುವ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ವಿಶ್ರಾಂತಿಗೆ ಮನವಿ ಮಾಡಿದ್ದು, ಮುಂಬರುವ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಲು ತಾವು ದೈಹಿಕ ಕ್ಷಮತೆ ಬಗ್ಗೆ ಗಮನ ಕೊಡಬೇಕಾಗಿದೆ ಎಂದು ಅವರು ಕಾರಣ ನೀಡಿದ್ದಾರೆ.

ಅಲ್ಲದೆ ತಾವು ಪ್ರಸ್ತುತ ತರಬೇತಿ ಪಡೆಯುತ್ತಿರುವ ಹಿಮಾಚಲ ಪ್ರದೇಶದ ಶಿಲಾರುವಿನ ತರಬೇತಿ ಕೇಂದ್ರದ ತಮ್ಮ ಕೋಣೆ ಮತ್ತು ಇತರೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮನವಿ ಮಾಡಿದ್ದು, ಡೋಪಿಂಗ್ ಆಪಾದನೆಗೆ ಗುರಿ ಆಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮೀರಾಬಾಯಿ ಚಾನು ಅವರನ್ನು ಹೊರತುಪಡಿಸಿ ವೇಟ್‌ಲಿಫ್ಟರ್‌ಗಳಾದ ರಾಖಿ ಹಲ್ಡರ್, ಸತೀಶ್ ಶಿವಲಿಂಗಮ್, ಅಜಯ್ ಸಿಂಗ್, ವಿಕಾಸ್ ಠಾಕೂರ್ ಅವರುಗಳು ಏಷ್ಯಾ ಗೇಮ್ಸ್‌ನಲ್ಲಿ ಭಾಗಿಯಾಗಲು ಆಯ್ಕೆ ಆಗಿದ್ದಾರೆ.
ಈ ಬಾರಿಯ ಏಷ್ಯನ್ ಗೇಮ್ಸ್ ಇಂಡೋನೇಷ್ಯಾದ ಜಕಾರ್ಥ, ಪಾಲೆಂಬಾಗ್‌ನಲ್ಲಿ ನಡೆಯಲಿದ್ದು, ಆಗಸ್ಟ್ 18ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 02ಕ್ಕೆ ಮುಕ್ತಾಯವಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications