Sourav Ganguly: ಸೌರವ್ ಗಂಗೂಲಿ ಜಮೀನು ಅತಿಕ್ರಮಣ ಪ್ರಕರಣ; ವಿಚಾರಣೆ ನಡೆಸಿದ ಪಶ್ಚಿಮ ಬಂಗಾಳ ಪೊಲೀಸರು
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಒಡೆತನದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮತ್ತು ಅತಿಕ್ರಮಿಸಿಕೊಂಡಿರುವ ಬಗ್ಗೆ ದೂರಿನ ಬಗ್ಗೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಮಹೇಶತಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸೌರವ್ ಗಂಗೂಲಿ ಅವರ ಕ್ರಿಕೆಟ್ ಅಕಾಡೆಮಿ ಹೆಸರಿನಲ್ಲಿ ದಾಖಲಾದ ಜಮೀನನ್ನು ಸುಪ್ರಿಯೋ ಭೌಮಿಕ್ ಎಂಬ ವ್ಯಕ್ತಿ ಒತ್ತುವರಿ ಮಾಡಿ ವಶಪಡಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಸೌರವ್ ಗಂಗೂಲಿ ಅವರ ಆಪ್ತ ಕಾರ್ಯದರ್ಶಿ ತಾನ್ಯಾ ಭಟ್ಟಾಚಾರ್ಯ ದೂರು ದಾಖಲಿಸಿದ್ದಾರೆ.

ಪೊಲೀಸ್ ದೂರಿನಲ್ಲಿ ತಾನ್ಯಾ ಭಟ್ಟಾಚಾರ್ಯ ಅವರು, ""ತಮ್ಮ ಭದ್ರತಾ ಸಿಬ್ಬಂದಿಯು ವಿರೋಧಿಸಿದರೂ, ಸುಪ್ರಿಯೋ ಭೌಮಿಕ್ ಮತ್ತು ಅವರ ಕೆಲವು ಸಹಚರರು ನಿಂದನೆಯನ್ನು ಮಾಡಿದರು. ಆರೋಪಿಯು ತನಗೆ ದೂರವಾಣಿ ಕರೆ ಮಾಡಿ ನಿಂದಿಸಿದ್ದಾನೆ,'' ಎಂದು ತಾನ್ಯಾ ಭಟ್ಟಾಚಾರ್ಯ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಆರೋಪಿ ಸುಪ್ರಿಯೋ ಭೌಮಿಕ್ ಅವರನ್ನು ಮಹೇಶಲ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ ಮತ್ತು ಭದ್ರತಾ ಸಿಬ್ಬಂದಿಯಿಂದ ಅನೈತಿಕ ಚಟುವಟಿಕೆಗಳ ವಿರುದ್ಧ ಪ್ರತಿಭಟಿಸುವುದಕ್ಕಾಗಿ ತನ್ನನ್ನು ಸಿಲುಕಿಸಲಾಗಿದೆ ಎಂಬ ಆರೋಪ ಮಾಡಿದ್ದಾರೆ.
ತಮ್ಮ ನಾಯಕತ್ವದ ಹಾಗೂ ಈಗಿನ ತಂಡದ ಹೋಲಿಕೆ ಮಾಡಿದ ಸೌರವ್ ಗಂಗೂಲಿ
ಇನ್ನು ಇದೇ ವೇಳೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯು ಪ್ರಸ್ತುತ ಟೆಸ್ಟ್ ತಂಡ ಮತ್ತು ಈ ಹಿಂದೆ ತಮ್ಮ ನಾಯಕತ್ವದ ತಂಡದ ನಡುವಿನ ವ್ಯತ್ಯಾಸವನ್ನು ತಿಳಿಸಿದ್ದಾರೆ. ಆಗಿನ ಟೆಸ್ಟ್ ತಂಡವು ವಿದೇಶದ ದೊಡ್ಡ ಮೈದಾನಗಳಲ್ಲಿ ಸ್ಥಿರವಾಗಿ ಅಧಿಕ ರನ್‌ಗಳನ್ನು ಗಳಿಸುತ್ತಿತ್ತು ಎಂದು ಹೇಳಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಗಳಿಸುವುದರಿಂದ ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೆಚ್ಚಿಸಲಾಗುತ್ತಿತ್ತು. ಪ್ರಸ್ತುತ ಭಾರತ ತಂಡವು ನಾಕೌಟ್ ಪಂದ್ಯಗಳಲ್ಲಿ ಅದನ್ನು ಮಾಡಲು ವಿಫಲವಾಗುತ್ತಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
"ಭಾರತ ತಂಡಕ್ಕೆ ಆಕ್ರಮಣಶೀಲತೆ ಶೈಲಿ ಆಟ ಅಗತ್ಯವಾಗಿದೆ. ಇದೇ ವೇಳೆ ಕಾರ್ಯಕ್ಷಮತೆಯೂ ಬೇಕಾಗಿದೆ. 2001 ಮತ್ತು 2006ರ ನಡುವಿನ ಐದಾರು ವರ್ಷಗಳನ್ನು ಗಮನಿಸಿದರೆ, ಸಿಡ್ನಿ, ಬ್ರಿಸ್ಬೇನ್, ಹೆಡಿಂಗ್ಲಿ, ನಾಟಿಂಗ್‌ಹ್ಯಾಮ್, ಓವಲ್, ಪೇಶಾವರ್, ಇಸ್ಲಾಮಾಬಾದ್ ಮತ್ತು ಲಾಹೋರ್ ಆಗಿರಲಿ ದೊಡ್ಡ ಮೈದಾನಗಳಲ್ಲಿ ಭಾರತ ತಂಡವು 500-600 ರನ್ ಗಳಿಸುತ್ತಿತ್ತು. ಈ ಮೂಲಕ ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಲಾಗುತ್ತಿತ್ತು," ಎಂದು ಸೌರವ್ ಗಂಗೂಲಿ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
ಕಳೆದ ಒಂದು ದಶಕದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ, ಭಾರತ ತಂಡವು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಸನ್ನಿವೇಶ ಮತ್ತು ಪಿಚ್ ಬದಲಾವಣೆ ಲೆಕ್ಕಿಸದೆ 350-400 ರನ್ ಗಳಿಸುವ ಅಗತ್ಯವಿದೆ ಎಂದು ಹೇಳಿದರು.
"ಅದ್ದರಿಂದ ಸದ್ಯದ ಭಾರತ ತಂಡ ಇದನ್ನು ಮಾಡಬೇಕು ಎಂದು ನಾನು ಭಾವಿಸುತ್ತೇನೆ. 10 ವರ್ಷಗಳ ಹಿಂದೆ ಕ್ರಿಕೆಟ್ ಸ್ವಲ್ಪ ಬದಲಾಗಿದೆ ಎಂದು ನಾನು ಬಲ್ಲೆ. ಇದೀಗ ಸನ್ನಿವೇಶ ಮತ್ತು ಪಿಚ್‌ಗಳು ಬದಲಾಗಿವೆ. ಆದರೆ ಭಾರತ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 350-400 ರನ್ ಗಳಿಸುವುದಕ್ಕೆ ಪ್ರಯತ್ನಿಸಬೇಕಿದೆ," ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications