ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಏಕೈಕ ಬೆಳ್ಳಿ ಪದಕ ಗೆದ್ದು ಕೊಟ್ಟ ಜಾವೆಲಿನ ಎಸೆತಗಾರ ನೀರಜ್ ಚೋಪ್ರಾ ಪ್ರಸ್ತುತ ಸ್ವಿಟ್ಜರ್ಲೆಂಡ್‌ನಲ್ಲಿದ್ದಾರೆ. ಬೆಳ್ಳಿ ಪದಕ ಗೆದ್ದರೂ ಅವರು ಇನ್ನೂ ಭಾರತಕ್ಕೆ ವಾಪಸಾಗಿಲ್ಲ.
ಪ್ಯಾರಿಸ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಅವರಿಂದ ಇಡೀ ದೇಶವೇ ಬಂಗಾರದ ಪದಕವನ್ನು ನಿರೀಕ್ಷಿಸಿತ್ತು. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಅವರ ದಾಖಲೆಯ ಹೊರತಾಗಿಯೂ ನೀರಜ್ ಬೆಳ್ಳಿ ಪದಕವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಪದಕ ಗೆದ್ದ ನಂತರವೂ ನೀರಜ್ ತಮ್ಮ ಪ್ರದರ್ಶನದಿಂದ ಅಷ್ಟಾಗಿ ತೃಪ್ತರಾಗಿಲ್ಲ.

ಈಗ ಸ್ವಿಟ್ಜರ್ಲೆಂಡ್‌ನಲ್ಲಿರುವ ನೀರಜ್ ಲೌಸನ್ನೆ ಡೈಮಂಡ್ ಲೀಗ್ 2024ರಲ್ಲಿ ಬಂಗಾರ ಗೆಲ್ಲುವ ಸಂಕಲ್ಪ ತೊಟ್ಟಿದ್ದಾರೆ. ಇಂದಿನಿಂದ (ಆಗಸ್ಟ್ 22) ಆರಂಭವಾಗುತ್ತಿರುವ ಡೈಮಂಡ್ ಲೀಗ್ 2024 ರ ಅರ್ಹತಾ ಸುತ್ತಿನ ಅವರು ತಮ್ಮ ಅಭಿಯಾನ ಆರಂಭಿಸಲು ಸಜ್ಜಾಗಿದ್ದಾರೆ.
ಈ ಕ್ರೀಡಾಕೂಟವು ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿರುವ ಸ್ಟೇಡ್ ಒಲಿಂಪಿಕ್ ಡೆ ಲಾ ಪಾಂಟೆಸ್‌ನಲ್ಲಿ ನಡೆಯಲಿದೆ. ನೀರಜ್ ಚೋಪ್ರಾ , ಪ್ಯಾರಿಸ್ ಒಲಿಂಪಿಕ್ಸ್ 2024ರ ಕಂಚಿನ ವಿಜೇತೆ ಆಂಡರ್ಸನ್ ಪೀಟರ್ಸ್ (ಗ್ರೆನಡಾ), ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್) ಮತ್ತು ಜೂಲಿಯಸ್ ಯೆಗೊ (ಕೀನ್ಯಾ) ಅವರೊಂದಿಗೆ ಸ್ಪರ್ಧಿಸಲಿದ್ದಾರೆ.
ಇದು ನೀರಜ್ ಅವರ ಎರಡನೇ ಡೈಮಂಡ್ ಲೀಗ್ ಪ್ರದರ್ಶನವಾಗಿದೆ. ಇದೇ ವರ್ಷ ಮೇ ತಿಂಗಳಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಅವರು ಎರಡನೇ ಸ್ಥಾನ ಗಳಿಸಿದ್ದರು. ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಅವರ ಸ್ಪರ್ಧೆಯನ್ನು ನೋಡಿ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿದೆ.
ನೀರಜ್ ಪ್ಯಾರಿಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಈ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಅವರ ದಾಖಲೆಯನ್ನು ಮುರಿಯುವ ಮೂಲಕ ಖಂಡಿತವಾಗಿಯೂ ಭಾರತಕ್ಕೆ ಬಂಗಾರ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
ಡೈಮಂಡ್ ಲೀಗ್ ಇಂದು (ಗುರುವಾರ) ರಾತ್ರಿ 11.30ಕ್ಕೆ ಆರಂಭವಾಗಲಿದೆ. ಭಾರತೀಯ ಕಾಲಮಾನ ಆಗಸ್ಟ್ 23 ರಂದು (12:22 AM) ನೀರಜ್ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಲೀಗ್ ಅನ್ನು JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ವಿಕ್ಷೀಸಬಹುದು. ಟಿವಿ ನೇರ ಪ್ರಸಾರ Sports 18-3 ಚಾನೆಲ್‌ನಲ್ಲಿ ಲಭ್ಯವಿರುತ್ತದೆ.