ಕರ್ನಾಟಕದ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ ಇರುವುದು ರಾಜಧಾನಿ ಬೆಂಗಳೂರಿನಲ್ಲಿ, ಅದು ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ. ಈ ಸ್ಟೇಡಿಯಂ ರಾಜ್ಯದಿಂದ ಘಟಾನುಘಟಿ ಕ್ರಿಕೆಟಿಗರನ್ನು ದೇಶಕ್ಕೆ ನೀಡಿದೆ.
ಕರ್ನಾಟಕದ ಬಿ.ಎಸ್ ಚಂದ್ರಶೇಖರ್, ಎರ್ರಪ್ಪಳ್ಳಿ ಪ್ರಸನ್ನ, ಗುಂಡಪ್ಪ ವಿಶ್ವನಾಥ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಆರ್. ವಿನಯ್‌ಕುಮಾರ್, ಮನೀಶ್ ಪಾಂಡೆ, ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಇನ್ನು ಹಲವಾರು ಕ್ರಿಕೆಟಿಗರಿಗೆ ವೃತ್ತಿಜೀವನ ಕಲ್ಪಿಸಿಕೊಟ್ಟಿದ್ದು ಇದೇ ಎಂ ಚಿನ್ನಸ್ವಾಮಿ ಕ್ರೀಡಾಂಗಣ.

ರಾಜ್ಯದಲ್ಲಿ ಘಟಾನುಘಟಿ ಕ್ರಿಕೆಟ್ ಆಟಗಾರರು ಇದ್ದರೂ ಯಾಕೆ ಚಿನ್ನಸ್ವಾಮಿ ಅವರ ಹೆಸರು ಈ ಕ್ರೀಡಾಂಗಣಕ್ಕೆ ಇಡಲಾಯಿತು ಎಂಬುದು ಆಸಕ್ತಿಕರ ಸಂಗತಿಯಾಗಿದೆ. ಇದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಂ. ಚಿನ್ನಸ್ವಾಮಿ ಅವರ ಪೂರ್ಣ ಹೆಸರು ಮಂಗಳಂ ಚಿನ್ನಸ್ವಾಮಿ. ಇವರು 1900ರ ಮಾರ್ಚ್ 29ರಂದು ಮಂಡ್ಯದಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರಾದ ಚಿನ್ನಸ್ವಾಮಿ 1925ರಿಂದ 1975ರವರೆಗೆ ಸಕ್ರಿಯವಾಗಿ ವಕೀಲ ವೃತ್ತಿ ನಡೆಸಿದರು.
ಆಗ ಅನೇಕ ಪ್ರಸಿದ್ಧ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿದ್ದರು ಮತ್ತು ಎಂಇಎಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿದ್ದರು. ಅಲ್ಲದೆ, ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿಗೂ ಅಪಾರ ಪರಿಶ್ರಮ ವಹಿಸಿದ್ದರು.

ಎಂ ಚಿನ್ನಸ್ವಾಮಿ ಭಾರತೀಯ ಕ್ರಿಕೆಟ್‌ನ ನಿರ್ವಾಹಕರಾಗಿ ಪ್ರಸಿದ್ಧರಾದವರು. ಅವರು ಬ್ಯಾಟಿಂಗ್ ಆಗಲಿ, ಬೌಲಿಂಗ್ ಆಗಲಿ ಮಾಡಿದವರಲ್ಲ. 1952-53ರ ಅವಧಿಯಲ್ಲಿ ಕ್ರಿಕೆಟ್ ಅಸೋಸಿಯೇಷನ್ ಮತ್ತು ಆರ್ಮಿ ಅಧಿಕಾರಿಗಳ ಪಂದ್ಯದ ಸಮಯದಲ್ಲಿ ಒಂದು ಭಿನ್ನಾಭಿಪ್ರಾಯ ಬಗೆಹರಿಸಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕ್ರಿಕೆಟ್ ಲೋಕಕ್ಕೆ ಬಂದರು.
ಮುಂದೆ ಭಾರತೀಯ ಕ್ರಿಕೆಟ್ ಸಂಸ್ಥೆಗೆ ಕಾರ್ಯದರ್ಶಿಗಳಾಗಿ ಪರಿಗಣಿಸಲಾದ ಅವರು, ಮುಂದಿನ 25 ವರ್ಷಗಳ ಕಾಲ ಕ್ರಿಕೆಟ್ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದರು ಮತ್ತು ಕ್ರಿಕೆಟ್ ಲೋಕದಲ್ಲಿ ಅಮರರಾದರು.
ಎಂ ಚಿನ್ನಸ್ವಾಮಿ 1977ರಿಂದ 1980ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ 1960ರಿಂದ 1965ರವರೆಗೆ ಕಾರ್ಯದರ್ಶಿಯಾಗಿದ್ದರು. ಎಂ ಚಿನ್ನಸ್ವಾಮಿ ದೀರ್ಘ ಕಾಲದವರೆಗೆ ಉಪಾಧ್ಯಕ್ಷರಾಗಿ, ಜಂಟಇ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1965, 1973, 1977-1980ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಮಂಗಳಂ ಚಿನ್ನಸ್ವಾಮಿ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸಂಸ್ಥಾಪಕರಲ್ಲಿ ಅಗ್ರಗಣ್ಯರು. ಅವರು 1978ರವರೆಗೆ ಅದರ ಕಾರ್ಯದರ್ಶಿಯಾಗಿದ್ದರು ಮತ್ತು 1978ರಿಂದ 1990ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಎಂ ಚಿನ್ನಸ್ವಾಮಿ ಅವರು 1967-68ರಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ತಂಡದ ಪ್ರವಾಸಕ್ಕೆ ಖಜಾಂಚಿಯಾಗಿ ಮತ್ತು ಎರಡನೇ ಅಧಿಕಾರಿಯಾಗಿದ್ದರು.
2 ವರ್ಷಗಳ ನಂತರ ಭಾರತಕ್ಕೆ ಆಸ್ಟ್ರೇಲಿಯಾ ತಂಡ ಪ್ರವಾಸ ಕೈಗೊಂಡಿದ್ದಾಗ, ದ್ವಿಪಕ್ಷೀಯ ಸರಣಿಯ ವ್ಯವಸ್ಥಾಪಕರಾಗಿದ್ದರು. ಎಂಸಿಸಿ 1969ರಲ್ಲಿ ಎಂ ಚಿನ್ನಸ್ವಾಮಿ ಅವರಿಗೆ ಆಜೀವ ಸದಸ್ಯತ್ವವನ್ನು ನೀಡಿ ಗೌರವಿಸಿತು.
ಬೆಂಗಳೂರಿನ ಹೃದಯ ಭಾಗದಲ್ಲಿ ಕೆಎಸ್‌ಸಿಎ ಕ್ರೀಡಾಂಗಣ ನಿರ್ಮಾಣದಲ್ಲಿ ಎಂ ಚಿನ್ನಸ್ವಾಮಿ ಅವರದ್ದು ಬಹುಮುಖ್ಯ ಪಾತ್ರ ಮತ್ತು ಹಿಂದಿನ ಪ್ರೇರಕ ಶಕ್ತಿ ಎಂದರೆ ತಪ್ಪಾಗಲಾರದು. ಅನೇಕ ಗಣ್ಯ ವ್ಯಕ್ತಿಗಳಿಂದ ಪಡೆದ ಅವರು, 1969ರಲ್ಲಿ ಮಹಾತ್ಮ ಗಾಧಿ ರಸ್ತೆ (ಎಂ.ಜಿ ರೋಡ್) ಪ್ರದೇಶದಲ್ಲಿ ಕ್ರಿಕೆಟ್‌ಗಾಗಿ ಕ್ರೀಡಾಂಗಣ ಮಂಜೂರು ಮಾಡಲು ಕರ್ನಾಟಕ ಸರ್ಕಾರವನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.
ನಿಸ್ವಾರ್ಥಿ ಎಂ ಚಿನ್ನಸ್ವಾಮಿ ಅವರು ತಮ್ಮ ಹೆಸರನ್ನು ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣಕ್ಕೆ ಇಡಲು ಸಹಮತ ಹೊಂದಿರಲಿಲ್ಲ. ಆದಾಗ್ಯೂ, ರಾಜ್ಯ ಮತ್ತು ದೇಶದ ಕ್ರಿಕೆಟ್‌ಗೆ ಅವರ ಕೊಡುಗೆಗಳನ್ನು ಗೌರವಿಸಲು ನಾಡಿನ ಕ್ರಿಕೆಟ್ ಪ್ರಿಯರು ಮತ್ತು ಆಡಳಿತ ಮಂಡಳಿಯು ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ಎಂದು ಹೆಸರಿಟ್ಟರು. ಮಂಗಳಂ ಚಿನ್ನಸ್ವಾಮಿ ಅವರು ನವೆಂಬರ್ 8, 1991ರಂದು ನಿಧನರಾದರು.