
2022ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಶುಕ್ರವಾರದಂದು ಅಂದರೆ ಫೆಬ್ರವರಿ 4ರಂದು ಈ ಟೂರ್ನಿಗೆ ಅಧಿಕೃತ ಚಾಲನೆ ದೊರೆಯಲಿದೆ. ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಭಾಗಿಯಾಗಲಿರುವ ಆಟಗಾರರು ಈಗಾಗಲೇ ಬೀಜಿಂಗ್‌ಗೆ ತಲುಪಿದ್ದಾರೆ. ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಲಿದ್ದರೂ ಕೆಲ ಅರ್ಹತಾ ಸುತ್ತಿನ ಕ್ರೀಡೆಗಳು ಫೆಬ್ರವರಿ 2 ಬುಧವಾರದಿಂದಲೇ ಆರಂಭವಾಗಲಿದೆ.
ಬೀಜಿಂಗ್‌ನಲ್ಲಿರುವ 'ಬರ್ಡ್ಸ್ ನೆಸ್ಟ್' ಎಂದು ಖ್ಯಾತವಾಗಿರುವ ನ್ಯಾಶನಲ್ ಸ್ಟೇಡಿಯಂನಲ್ಲಿ ಈ ವಿಂಟರ್ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಬ ನಡೆಯಲಿದೆ. ಈ ಕ್ರೀಡಾಂಗಣ 2008ರ ಬೋಹಿಂಗ್ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಕ್ಕೆ ಸಾಕ್ಷಿಯಾಗಿತ್ತು. ಆದರೆ ಈ ಬಾರಿ ಈ ಕ್ರೀಡಾಂಗಣದಲ್ಲಿ ಯಾವುದೇ ಸ್ಪರ್ಧೆಗಳು ಕೂಡ ಈ ಕ್ರೀಡಾಂಗಣದಲ್ಲ ನಡೆಯುವುದಿಲ್ಲ.
ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ಹೊಸ 7 ಒಲಿಂಪಿಕ್ಸ್ ಕ್ರೀಡೆಗಳಿಗೆ ವೇದಿಕೆಯಾಗಲಿದೆ. 15 ಕ್ರೀಡೆಗಳಲ್ಲಿ 109 ಪದಕಗಳಿಗಾಗಿ ಸ್ಪರ್ಧೆಗಳು ನಡೆಯಲಿದೆ. ಇನ್ನು ಈ ಕ್ರೀಡಾಕೂಡದ ಸಮಾರೋಪ ಸಮಾರಂಭ ಫೆಬ್ರವರಿ 20ರಂದು ಬೀಜಿಂಗ್‌ನ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇನ್ನು ಈ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಓರ್ವ ಕ್ರೀಡಾಪಟು ಮಾತ್ರವೇ ಭಾಗವಹಿಸುತ್ತಿದ್ದಾರೆ ಎಂಬುದು ಗಮನಾರ್ಹ. 31ರ ಹರೆಯದ ಕಾಶ್ಮೀರ ಮೂಲದ ಆರಿಫ್ ಖಾನ್ ಈ ಚಳಿಗಾದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ. ಈ ಮೂಲಕ ಕಾಶ್ಮೀರ ಹಾಗೂ ಭಾರತದ ಹೆಮ್ಮೆಗೆ ಕಾರಣವಾಗಿದ್ದಾರೆ.
ಕಳೆದ 13 ವರ್ಷಗಳಲ್ಲಿ ಭಾರತದ ಯಾವ ಕ್ರೀಡಾಪಟು ಕೂಡ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಅರ್ಹತೆಯನ್ನು ಪಡೆಯಲು ವಿಫಲವಾಗಿದ್ದರು. ಆದರೆ ಈ ಬಾರಿಯ ವಿಂಟರ್ ಒಲಿಂಪಿಕ್ಸ್‌ಗೆ ಆರಿಫ್ ಖಾನ್ ಅರ್ಹತೆ ಸಂಪಾದಿಸುವ ಮೂಲಕ ಈ ಕೊರತೆಯನ್ನು ನೀಗಿಸಿದ್ದಾರೆ.
ಇನ್ನು ಆರಿಫ್ ಖಾನ್ ಈ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಲು ಕೂಡ ಸಜ್ಜಾಗಿದ್ದಾರೆ. ಭಾರತದ ಯಾವ ಕ್ರೀಡಾಪಟು ಕೂಡ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಎರಡು ವಿಭಿನ್ನ ವಿಭಾಗದಲ್ಲಿ ಅರ್ಹತೆ ಸಂಪಾದಿಸಿದ ಸಾಧನೆ ಮಾಡಿರಲಿಲ್ಲ. ಆದರೆ ಆರಿಫ್ ಖಾನ್ ಮೊದಲ ಬಾರಿಗೆ ವಿಶೇಷ ಸಾಧನೆ ಮಾಡಿದ್ದಾರೆ.
ಹಾಜಿಬಲ್ ತಂಗ್ಮಾರ್ಗ್ ಪ್ರದೇಶದ 31ರ ಹರೆಯದ ಆರಿಫ್ ಖಾನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಈವರೆಗೆ ಜಗತ್ತಿನಾದ್ಯಂತ ಸ್ಕೀಯಿಂಗ್‌ನ 127 ಅಂತರಾಷ್ಟ್ರೀಯ ಈವೆಂಟ್‌ಗಳಲ್ಲಿ ಭಾಗವಹಿಸಿದ ಸಾಧನೆ ಮಾಡಿರುವುದಾಗಿಯೂ ಆರಿಫ್ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರಿಫ್ ಖಾನ್ "ನನಗೊಂದು ಕನಸಿತ್ತು ಅದು ಈಗ ನನಸಾಗುತ್ತಿದೆ. ನನ್ನ ತಂದೆ ನನಗಾಗಿ ಕಂಡ ಕನಸು ನನಸಾಗಲು ನಾನು ಸಾಕಷ್ಟು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಅದೀಗ ನನಸಾಗುತ್ತಿರುವುದು ಅದ್ಭುತ ಅನುಭವ ನೀಡುತ್ತಿದೆ" ಎಂದಿದ್ದಾರೆ ಆರಿಪ್.