
ಚೀನಾದ ಬೀಜಿಂಗ್‌ನಲ್ಲಿ ಆರಂಭವಾಗಲಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಬೀಜಿಂಗ್‌ನಲ್ಲಿ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯೋಜಕರು ವೈರಸ್ ನಿರೀಕ್ಷಿತ ಮಟ್ಟದಲ್ಲಿದ್ದು ನಿಯಂತ್ರಿಸಬಹುದಾದ ವ್ಯಾಪ್ತಿಯಲ್ಲಿ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಬೀಜಿಂಗ್ 2022 ರ ಚಳಿಗಾಲದ ಒಲಿಂಪಿಕ್ಸ್ ಸಂಘಟನಾ ಸಮಿತಿ ಜನವರಿ 23 ರಿಂದ ವಿಮಾನ ನಿಲ್ದಾಣದ ಮೂಲಕ ಆಗಮಿಸುತ್ತಿರುವವರ ಪೈಕಿ 200 ಜನರಿಗೆ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳನ್ನು ವರದಿ ಮಾಡಿದೆ. ಕ್ರೀಡಾಕೂಟದ ಬಬಲ್‌ನಲ್ಲಿರುವ ಕ್ರೀಡಾಪಟುಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿರುವಂತೆ ವ್ಯವಸ್ಥೆಗಳನ್ನು ಆಯೋಜಕರು ಕೈಗೊಂಡಿದ್ದಾರೆ ಎನ್ನಲಾಗಿದೆ.
"ಚೀನಾಗೆ ಹೆಚ್ಚಿನ ಜನರು ಆಗಮಿಸುತ್ತಿರುವ ಕಾರಣದಿಂದಾಗಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ" ಎಂದು ಕ್ರೀಡಾಕೂಟದ ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಚೇರಿಯ ಉಪ ಮಹಾನಿರ್ದೇಶಕ ಹುವಾಂಗ್ ಚುನ್ ಮಾಹಿತಿ ನೀಡಿದ್ದಾರೆ. ಇನ್ನು ಕೊರೊನಾವೈರಸ್‌ಗಳ ಸಂಖ್ಯೆ ಹೆಚ್ಚಾಗಲು ಪರಿಣಾಮಕಾರಿಯಾಗಿ ಹಾಗೂ ನಿರ್ದಿಷ್ಟವಾಗಿ ವೈರಸ್‌ಅನ್ನು ಪತ್ತೆಹಚ್ಚುತ್ತಿರುವುದು ಕೂಡ ಕಾರಣ ಎಂದಿದ್ದಾರೆ.
ಮುಂದಿನ ಶುಕ್ರವಾರದಂದು ಅಂದರೆ ಫೆಬ್ರವರಿ 4ರಂದು ಈ ಟೂರ್ನಿಗೆ ಅಧಿಕೃತ ಚಾಲನೆ ದೊರೆಯಲಿದೆ. ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಭಾಗಿಯಾಗಲಿರುವ ಆಟಗಾರರು ಈಗಾಗಲೇ ಬೀಜಿಂಗ್‌ಗೆ ತಲುಪಿದ್ದಾರೆ. ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಲಿದ್ದರೂ ಕೆಲ ಅರ್ಹತಾ ಸುತ್ತಿನ ಕ್ರೀಡೆಗಳು ಫೆಬ್ರವರಿ 2 ಬುಧವಾರದಿಂದಲೇ ಆರಂಭವಾಗಲಿದೆ.
ಬೀಜಿಂಗ್‌ನಲ್ಲಿರುವ 'ಬರ್ಡ್ಸ್ ನೆಸ್ಟ್' ಎಂದು ಖ್ಯಾತವಾಗಿರುವ ನ್ಯಾಶನಲ್ ಸ್ಟೇಡಿಯಂನಲ್ಲಿ ಈ ವಿಂಟರ್ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಬ ನಡೆಯಲಿದೆ. ಈ ಕ್ರೀಡಾಂಗಣ 2008ರ ಬೋಹಿಂಗ್ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಕ್ಕೆ ಸಾಕ್ಷಿಯಾಗಿತ್ತು. ಆದರೆ ಈ ಬಾರಿ ಈ ಕ್ರೀಡಾಂಗಣದಲ್ಲಿ ಯಾವುದೇ ಸ್ಪರ್ಧೆಗಳು ಕೂಡ ಈ ಕ್ರೀಡಾಂಗಣದಲ್ಲ ನಡೆಯುವುದಿಲ್ಲ.
ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ಹೊಸ 7 ಒಲಿಂಪಿಕ್ಸ್ ಕ್ರೀಡೆಗಳಿಗೆ ವೇದಿಕೆಯಾಗಲಿದೆ. 15 ಕ್ರೀಡೆಗಳಲ್ಲಿ 109 ಪದಕಗಳಿಗಾಗಿ ಸ್ಪರ್ಧೆಗಳು ನಡೆಯಲಿದೆ. ಇನ್ನು ಈ ಕ್ರೀಡಾಕೂಡದ ಸಮಾರೋಪ ಸಮಾರಂಭ ಫೆಬ್ರವರಿ 20ರಂದು ಬೀಜಿಂಗ್‌ನ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇನ್ನು ಈ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಓರ್ವ ಕ್ರೀಡಾಪಟು ಮಾತ್ರವೇ ಭಾಗವಹಿಸುತ್ತಿದ್ದಾರೆ ಎಂಬುದು ಗಮನಾರ್ಹ. 31ರ ಹರೆಯದ ಕಾಶ್ಮೀರ ಮೂಲದ ಆರಿಫ್ ಖಾನ್ ಈ ಚಳಿಗಾದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ. ಈ ಮೂಲಕ ಕಾಶ್ಮೀರ ಹಾಗೂ ಭಾರತದ ಹೆಮ್ಮೆಗೆ ಕಾರಣವಾಗಿದ್ದಾರೆ.