ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಫೈನಲ್ ಸ್ಪರ್ಧೆಯಲ್ಲಿ 7ನೇ ಸ್ಥಾನ ಪಡೆದ ಮುರಳಿ ಶ್ರೀಶಂಕರ್

ಭಾರತದ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದಾರೆ. ಆದರೆ ಪ್ರಶಸ್ತಿ ಸುತ್ತಿನಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟು ಲಾಂಗ್‌ಜಂಪ್‌ನಲ್ಲಿ ಫೈನಲ್ ಹಂತಕ್ಕೇರಿರುವುದು ಇದೇ ಮೊದಲು ಎಂಬುದು ಗಮನಾರ್ಹ ಸಂಗತಿ.
ಫೈನಲ್‌ನಲ್ಲಿ ಮುರಳಿ ಶ್ರೀಶಂಕರ್ 7.96 ಮೀಟರ್ ಜಿಗಿದಿದ್ದಾರೆ. ಆದರೆ ಇದು ಶ್ರೀಶಂಕರ್ ಅವರ ವೈಯಕ್ತಿಕ ದಾಖಲೆಯ ಸನಿಹದಲ್ಲಿರಲಿಲ್ಲ. ಹೀಗಾಗಿ 7ನೇ ಸ್ಥಾನಕ್ಕೆ ಶ್ರೀಶಂಕರ್ ತೃಪ್ತಿಪಟ್ಟುಕೊಂಡಿದ್ದಾರೆ. ಈ ವರ್ಷದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದ ಶ್ರೀಶಂಕರ್ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ಫೈನಲ್ ಸ್ಪರ್ಧೆಯಲ್ಲಿ ನಿರಾಸೆ ಮೂಡಿಸಿದ್ದಾರೆ.
ಮುರಳಿ ಶ್ರೀಶಂಕರ್ ಫೈನಲ್ ಹಂತದಲ್ಲಿ ಮೂರು ಲೀಗಲ್ ಜಿಗಿತಗಳನ್ನು ಮಾಡಿದ್ದಾರೆ. ಆರಂಭಿಕ ಸುತ್ತಿನಲ್ಲಿ 7.96 ಮೀ ಜಿಗಿದಿದ್ದರೆ ನಾಲ್ಕನೇ ಸುತ್ತಿನ ಪ್ರಯತ್ನದಲ್ಲಿ 7.89 ಮೀ ಜಿಗಿದಿದ್ದರು. ಕೊನೆಯ ಪ್ರಯತ್ನದಲ್ಲಿ ಅವರು 7.83 ಮೀ. ಜಿಗಿದಿದ್ದರು. ಉಳಿದ ಮೂರು ಪ್ರಯತ್ನಗಳು ಫೌಲ್ ಆಗಿದ್ದವು.
23ರ ಹರೆಯದ ಈ ಆಟಗಾರ ಆರು ಪ್ರಯತ್ನಗಳಲ್ಲಿಯೂ 8 ಮೀಟರ್ ದಾಟಲು ಸಾಧ್ಯವಾಗದೆ ನಿರಾಸೆ ಅನುಭವಿಸಬೇಕಾಯಿರು. ಕಳೆದ ಮಾರ್ಚ್‌ನಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದ ಮುರಳಿ ಶ್ರೀಶಂಕರ್ 8.17ಮೀ, 8.36ಮೀ, 8.31ಮೀ ಮತ್ತು 8.23ಮೀ ಜಿಗಿಯುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದರು. ಅರ್ಹತಾ ಸುತ್ತಿನಲ್ಲಿ 8 ಮೀಟರ್ ದೂರ ಜಿಗಿಯುವ ಮೂಲಕ ಫೈನಲ್‌ಗೆ ನೇರ ಅರ್ಹತೆ ಪಡೆದಿದ್ದರು ಶಂಕರ್.
ಚೀನಾದ ಜಿಯಾನನ್ ವಾಂಗ್ 8.36 ಮೀಟರ್ ದೂರ ಜಿಗಿಯುವ ಮೂಲಕ ಚಿನ್ನದ ಪದಕ ಗೆದ್ದಿದ್ದರೆ ಒಲಿಂಪಿಕ್ ಚಿನ್ನದ ಪದಕ ವಿಜೇತ ಮಿಲ್ಟಿಯಾಡಿಸ್ ಟೆಂಟೊಗ್ಲೋ ಅಂತಿಮ ಸುತ್ತಿನವರೆಗೂ ಮುನ್ನಡೆ ಸಾಧಿಸಿ ಕೊನೆಗೆ 8.30 ಮೀಟರ್ ಜಿಗಿಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇನ್ನು ಭಾರತದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಿನಾಶ್ ಸಾಬ್ಲೆ ಕೂಡ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ನೇರವಾಗಿ ಫೈನಲ್‌ಗೆ ಅರ್ಹತೆ ಸಂಪಾದಿಸಿದ್ದಾರೆ. 8:18.75 ಸಮಯದಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆ ಮಾಡಿದ್ದಾರೆ ಅವಿನಾಶ್. ಪದಕ ಸುತ್ತಿಗೆ ಅರ್ಹತೆ ಪಡೆಯಲು ತಮ್ಮ ಹೀಟ್ಸ್‌ನಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications