ವಿಶ್ವ ಅಥ್ಲೆಟಿಕ್ಸ್ ದಿನವನ್ನು ಪ್ರತಿ ವರ್ಷ ಮೇ 7 ರಂದು ಆಚರಿಸಲಾಗುತ್ತದೆ. ಅಥ್ಲೆಟಿಕ್ಸ್‌ನಲ್ಲಿ ಯುವಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲೆಂದು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ (ಐಎಎಎಫ್) ವಿಶ್ವ ಅಥ್ಲೆಟಿಕ್ಸ್ ದಿನವನ್ನು ಪರಿಚಯಿಸಿದೆ.
ಪ್ರಸ್ತುತ ದಿನಗಳಲ್ಲಿ ಯುವಜನರು ದೈಹಿಕ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳವುದು ಕಡಿಮೆಯಾಗಿದೆ. ಅಂಗೈಯಲ್ಲಿ ಮೊಬೈಲ್ ಹಿಡಿದು ಮನೆಯಲ್ಲಿ ಕುಳಿತುಕೊಳ್ಳವ ಯುವಜನರು ಕಾಲಹರಣ ಮಾಡುವುದರ ಜೊತೆಗೆ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಹೀಗಾಗಿ ವಿಶ್ವಾದ್ಯಂತ ಆಚರಿಸಲಾಗುವ ಈ ದಿನವನ್ನು ನೆನಪಿಟ್ಟುಕೊಳ್ಳುವುದು ಒಂದೆಡೆಯಾದರೆ, ಈ ದಿನದ ಮಹತ್ವದ ಬಗ್ಗೆ ಜ್ಞಾನವನ್ನು ಪಡೆಯುವುದು ಸಹ ಮುಖ್ಯವಾಗಿದೆ. ಅಥ್ಲೆಟಿಕ್ಸ್ ಒಂದು ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡೆಯಾಗಿದ್ದು, ಇದು ಓಟ, ಜಿಗಿತ, ನಡಿಗೆ ಮತ್ತು ಎಸೆಯುವಿಕೆಯಂತಹ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಮೊಟ್ಟ ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ದಿನವನ್ನು 1996ರಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ಅಂದಿನ ಅಧ್ಯಕ್ಷ ಪ್ರಿಮೊ ನೆಬಿಯೊಲೊ ಅವರು ಪರಿಚಯಿಸಿದರು. ವಿಶ್ವ ಅಥ್ಲೆಟಿಕ್ಸ್ ದಿನವನ್ನು ಐಎಎಎಫ್ ಆಯೋಜಿಸಿ ಜೊತೆಗೆ ಪ್ರಾಯೋಜಿಸಿದೆ.
ಈ ದಿನ ಕೇವಲ ಆಚರಣೆಗಷ್ಟೆ ಸೀಮಿತವಾಗಿಲ್ಲ. ಜಾಗತಿಕ ಮಟ್ಟದಲ್ಲಿ ಎಲ್ಲ ಶಾಲಾ-ಕಾಲೇಜುಗಳು ಮತ್ತು ಹಲವಾರು ಇತರ ಸಂಸ್ಥೆಗಳು ತಮ್ಮ ಆಸಕ್ತಿಗಳನ್ನು ಹಲವಾರು ಅಥ್ಲೆಟಿಕ್ ಕ್ರೀಡೆಗಳಲ್ಲಿ ಉತ್ತೇಜಿಸಲು ವಿಶ್ವ ಅಥ್ಲೆಟಿಕ್ಸ್ ದಿನವು ಪ್ರೋತ್ಸಾಹಿಸುತ್ತದೆ. ಎಲ್ಲ ವಯಸ್ಸಿನವರು ಕೂಡ ಅಥ್ಲೆಟಿಕ್ ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ದೈಹಿಕ ಚಟುವಟಿಕೆಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಯುವಕರಲ್ಲಿ ಅಥ್ಲೆಟಿಕ್ ಕ್ರೀಡೆಗಳನ್ನು ಜನಪ್ರಿಯಗೊಳಿಸುವುದು. ಅಥ್ಲೆಟಿಕ್ ಕ್ರೀಡೆಗಳಿಗೆ ಉತ್ತೇಜನ ನೀಡುವುದು ಮತ್ತು ಶಾಲಾ-ಕಾಲೇಜು ಹಾಗು ಇತರ ಸಂಸ್ಥೆಗಳಲ್ಲಿ ಇದನ್ನು ಪ್ರಾಥಮಿಕ ಕ್ರೀಡೆಯನ್ನಾಗಿ ಮಾಡುವುದು. ಕ್ರೀಡೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ಯುವಜನರಿಗೆ ಕ್ರೀಡೆಯ ಮಹತ್ವದ ಬಗ್ಗೆ ಶಿಕ್ಷಣವನ್ನು ನೀಡುವುದು. ಯುವಜನತೆ, ಕ್ರೀಡೆ ಮತ್ತು ಪರಿಸರ ಸಂರಕ್ಷಣೆಯ ನಡುವೆ ಪ್ರಮುಖ ಸಂಪರ್ಕವನ್ನು ಕಲ್ಪಿಸುವುದು.
ಉತ್ತಮ ಜೀವನ ಮಟ್ಟ ಹೊಂದಲು ಪ್ರಮುಖವಾಗಿ ನಾವು ಮೊದಲು ದೈಹಿಕವಾಗಿ ಸಧೃಡವಾಗಿರಬೇಕು. ಜೊತೆಗೆ ನಮ್ಮ ಮನಸ್ಸಿನ ಮೇಲೆ ಹಿಡಿತವಿರಬೇಕು. ಈ ಎಲ್ಲ ಕಾರ್ಯಗಳು ಕ್ರೀಡೆ ಆಡುವುದರಿಂದಲೂ ಕೂಡ ಸಾಧ್ಯವಾಗುತ್ತವೆ. ಬಹಳ ಮುಖ್ಯವಾಗಿ ಕ್ರೀಡೆಯು ಮನಸ್ಥಿತಿ, ಏಕಾಗ್ರತೆ ಮತ್ತು ನಿದ್ರೆಯ ಅಭ್ಯಾಸವನ್ನು ಸುಧಾರಿಸುತ್ತದೆ. ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಅಲ್ಲದೆ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ.