ನಡುರಾತ್ರಿ ಗೃಹಸಚಿವರೊಂದಿಗೆ ರೆಸ್ಲರ್‌ಗಳ ಸಭೆ: ನಿರೀಕ್ಷಿಸಿದ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದ ಪ್ರತಿಭಟನಾನಿರತರು!
ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಬೃಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಆರೋಪಗಳನ್ನು ಮಾಡಿ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೆಸ್ಲರ್‌ಗಳು ಭಾನುವಾರ ತಡರಾತ್ರಿ ಕೇಂದ್ರ ಗೃಹಸಚಿವರನ್ನು ಭೇಟಿಮಾಡಿದ್ದಾರೆ. ಆದರೆ ಈ ಮಾತುಕತೆ ನಿರಾಶಾದಾಯಕವಾಗಿತ್ತು, ನಾವು ನಿರೀಕ್ಷಿಸಿದ ಪ್ರತಿಕ್ರಿಯೆ ಗೃಹಸಚಿವರಿಂದ ದೊರೆತಿಲ್ಲ ಎಂದು ಕುಸ್ತಿಪಟುಗಳು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಈ ಹೋರಾಟ ಮತ್ತಷ್ಟು ಮುಂದುವರಿಯುವ ಸೂಚನೆ ದೊರೆತಿದೆ.
ಈ ಸಭೆ ಸುಮಾರು ಎರಡು ಗಂಟೆಗಳ ಕಾಲ ನಡೆದಿದ್ದು ಮಧ್ಯರಾತ್ರಿಯ ಬಳಿಕ ಕೊನೆಗೊಂಡಿತು. ಒಲಿಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಹಲವು ಕುಸ್ತಿ ತರಬೇತುದಾರರು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಬಳಿಕ ಮಾತನಾಡಿದ ಬಜರಂಗ್ ಪುನಿಯಾ ಈ ಮಾತುಕತೆಯ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಆದರೆ ಅನುಭವಿ ಕುಸ್ತಿಪಟು ಸಾಕ್ಷಿ ಮಲಿಕ್ ಪತಿ ಹಾಗೂ ಸ್ವತಃ ರೆಸ್ಲರ್ ಆಗಿರುವ ಸತ್ಯವ್ರತ್ ಕಾಡಿಯನ್ ಮಾತುಕತೆಯ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಅಮಿತ್ ಶಾ ಅವರ ನಿವಾಸದಲ್ಲಿ ಮಾತುಕತೆ ನಡೆಸಿದ ಬಳಿಕ ಸತ್ಯವ್ರತ್ ಕಾಡಿಯನ್ ಪ್ರತಿಕ್ರಿಯಿಸಿದರು. "ಗೃಹಸಚಿವರ ಮಾತುಕತೆಯಲ್ಲಿ ನಾವು ನಿರೀಕ್ಷಿಸಿದ ಸ್ಪಂದನೆ ದೊರೆತಿಲ್ಲ. ಹಾಗಾಗಿ ಮೀಟಿಂಗ್‌ನಿಂದ ಹೊರಗೆ ಬಂದಿದ್ದೇವೆ. ನಮ್ಮ ಮುಂದಿನ ಹೋರಾಟದ ಬಗ್ಗೆ ನಾವು ನಿರ್ಧಾರ ಮಾಡಲಿದ್ದೇವೆ. ನಾವು ಈ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ" ಎಂದಿದ್ದಾರೆ ಸತ್ಯವ್ರತ್ ಕಾಡಿಯನ್.
ಕುಸ್ತಿಪಟುಗಳು ಹರಿದ್ವಾರಕ್ಕೆ ತೆರಳಿ ತಮ್ಮ ಪದಕಗಳನ್ನು ಗಂಗಾನದಿಗೆ ಎಸೆಯಲು ಮುಂದಾದ ಬಳಿಕ ಈ ಪ್ರತಿಭಟನೆಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ರೈತಮುಖಂಡ ರಾಕೇಶ್ ಟಿಕಾಯತ್ ಪ್ರತಿಭಟನಾ ನಿರತರನ್ನು ಮನವೊಲಿಸಿ ಪ್ರತಿಭಟನಾ ನಿರತರನ್ನು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದರು. ಆದರೆ ಈ ಸಂದರ್ಭದಲ್ಲಿ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಜೂನ್ 9ರ ಗಡುವು ನೀಡಲಾಗಿದೆ.
ಇನ್ನು ಕೇಂದ್ರ ಗೃಹಸಚಿವರನ್ನು ಭೇಟಿ ಮಾಡುವುದಕ್ಕೂ ಮುನ್ನ ರೆಸ್ಲರ್‌ಗಳು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ರೆಸ್ಲರ್‌ಗಳಿಗೆ ಕ್ರೀಡಾಸಚಿವ ಪ್ರತಿಭಟನಾ ನಿರತರ ಆರೋಪಗಳ ಬಗ್ಗೆ ನ್ಯಾಯಯುತವಾದ ತನಿಖೆ ನಡೆಸುವ ಭರವಸೆ ನೀಡಿದ್ದರು.
ಬಿಜೆಪಿ ಸಂಸದ ಆಗಿರುವ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಪ್ರಾಪ್ತರು ಸೇರಿದಂತೆ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳನ್ನು ಮಾಡಲಾಗಿದ್ದು ಬಂಧಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಈವರೆಗೆ ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿದ್ದು Pocso ಕಾಯ್ದೆಯ ಅಡಿಯಲ್ಲಿ ದೂರು ದಾಖಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications