ಗಂಭೀರ ಗಾಯ, WWE ಸ್ಟಾರ್ ರೇ ಮಿಸ್ಟೀರಿಯೋ ಮುಂದಿನ ವಾರ ನಿವೃತ್ತಿ!

ಬೆಂಗಳೂರು: 'ನೀನು ಅಂಡರ್‌ಟೇಕರ್, ನಾನು ಬ್ರಾಕ್ ಲೆಸ್ನರ್' ಅಂತ ಗೆಳೆಯನ ಜೊತೆ ಕುಸ್ತಿಯಾಡಿ, ಏಟು ತಿಂದು, ಗಾಯ ಮಾಡಿ ಬಾಲ್ಯ ಕಳೆದವರು ನಮ್ಮಲ್ಲಿ ಬಹುತೇಕ ಮಂದಿಯಿದ್ದಾರೆ. ನಮಗಾಗ ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ) ಅಷ್ಟು ಅಚ್ಚುಮೆಚ್ಚೆನಿಸಿತ್ತು. ಈಗಲೂ WWE ವೀಕ್ಷಿಸುತ್ತಾ ಆನಂದಿಸುವವರಿದ್ದಾರೆ. 'ಇವೆಲ್ಲ ಸ್ಕ್ರಿಪ್ಟೆಡ್, ಬರೀ ಸುಳ್ಳು' ಅಂತ ಮೂಗು ಮುರಿಯುವವರೂ ಇದ್ದಾರೆ. ಏನೇ ಇರಲಿ, WWE ರಿಂಗ್ ನಮ್ಮನ್ನು ಮನರಂಜಿಸಿದೆ, ಒಂದಿಲ್ಲೊಂದು ಸಮಯ ಬೇಜಾರು ಕಳೆಯೋಕೆ ನೆರವು ನೀಡಿದೆ ಅನ್ನೋದು ಸುಳ್ಳಲ್ಲ.
ಕೆಲವಾರು ವರ್ಷಗಳ ಹಿಂದೆ ನಮ್ಮೆಲ್ಲರನ್ನು ರಂಜಿಸಿದ್ದ WWE ಸ್ಟಾರ್‌ಗಳಲ್ಲಿ ಅನೇಕ ಮಂದಿ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಕೆಲವು ಮಂದಿ ನಿವೃತ್ತಿಯ ಅಂಚಿನಲ್ಲಿದ್ದಾರೆ. ದೊಡ್ಡ ಸೂಪರ್ ಸ್ಟಾರ್‌ಗಳು ನಿವೃತ್ತಿ ನೀಡುವುದರಲ್ಲಿದ್ದಾರೆ ಅನ್ನೋದಕ್ಕೆ ಅವರ ಅಪರೂಪದ ರಿಂಗ್ ಪ್ರವೇಶವೇ ಸಾಕ್ಷಿ ಹೇಳುತ್ತಿದೆ.
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್‌ಗಳ ಪೈಕಿ, 3 ಬಾರಿಯ ವರ್ಲ್ಡ್ ಚಾಂಪಿಯನ್ ಆಗಿ ಮಿನುಗಿದ್ದ ರಸ್ಲರ್ ಒಬ್ಬರು ಶೀಘ್ರ ನಿವೃತ್ತಿ ಘೋಷಿಸಲಿದ್ದಾರೆ.

ಚಾಂಪಿಯನ್‌ಗೆ ವಿದಾಯ ಕೂಟ
ಮೂರುಬಾರಿ WWE ವರ್ಲ್ಡ್ ಚಾಂಪಿಯನ್ ಪ್ರಶಸ್ತಿ ಗೆದ್ದಿರುವ ರೇ ಮಿಸ್ಟೀರಿಯೋಗೆ ಮುಂದಿನವಾರ ಅಂದರೆ 'ಮಂಡೇ ನೈಟ್ ರಾ'ದಲ್ಲಿ ವಿದಾಯಕೂಟ ನಡೆಯಲಿದೆ. ಡಬ್ಲ್ಯೂಡಬ್ಲ್ಯೂಇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಮಿಂಚಿನ ವೇಗದಲ್ಲಿ ಸ್ಟಂಟ್ ಪ್ರದರ್ಶಿಸುತ್ತಿದ್ದ, ಎದುರಾಳಿಯನ್ನು ರೋಪ್ ಮೇಲೆ ಬಿದ್ದುಕೊಳ್ಳುವಂತೆ ಮಾಡಿ, ಓಡಿ ಬಂದು ಕಿಕ್ ಮಾಡಿ ಎಷ್ಟೋ ಬಾರಿ ಮನರಂಜಿಸಿದ್ದ ಮಿಸ್ಟೀರಿಯೋ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಲಿದ್ದಾರೆ.

ನಿವೃತ್ತಿಗೆ ಕಾರಣವೇನು?
ಮೇ 11ರಿಂದಲೂ ರೇ ಮಿಸ್ಟೀರಿಯೋ ಕಾದಾಟಕ್ಕಾಗಿ ರಿಂಗ್‌ಗೆ ಬಂದಿಲ್ಲ. ಶೀಲ್ಡ್ ಟೀಮಿನ ಸೇಲ್ ರೋಲಿನ್ಸ್, ಮಿಸ್ಟೀರಿಯೋ ಕಣ್ಣಿಗೆ ಗಾಯ ಮಾಡಿದ್ದರಿಂದ ಮಿಸ್ಟೀರಿಯೋ ರಿಂಗ್‌ನಿಂದ ದೂರ ಉಳಿಯಬೇಕಾಗಿ ಬಂದಿದೆ. ಮನಿ ಇನ್‌ದ ಬ್ಯಾಂಕ್ ಸೂಟ್‌ಕೇಸ್ ಮ್ಯಾಚ್ ವೇಳೆ ಮಿಸ್ಟೀರಿಯೋಗೆ ಗಾಯವಾಗಿತ್ತು.

ಸೋಂಕಿನ ಅಪಾಯದಲ್ಲಿ ರೇ
'ರೇ ಮಿಸ್ಟೀರಿಯೊ ಅವರ ಗಾಯದ ಸ್ಥಿತಿ ಇನ್ನೂ ಕ್ರಿಟಿಕಲ್ ಆಗಿದೆ. ಬಾವು ಕಡಿಮೆಯಾಗುವವರೆಗೂ ವೈದ್ಯರು ಅವರ ರೆಟಿನಾದ ಹಾನಿಯನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಿಲ್ಲ, ಏಕೆಂದರೆ ರೇ ಪ್ರಸ್ತುತ ಸೋಂಕಿನ ಅಪಾಯದಲ್ಲಿದ್ದಾರೆ. ಸೇಥ್ ರೋಲಿನ್ಸ್, ರೇ ಮುಖವನ್ನು ಸ್ಟೀಲ್ ಸ್ಟೆಪ್ ಮೂಲೆಯಲ್ಲಿ ಗುದ್ದಿದಾಗ ಮಿಸ್ಟೀರಿಯೊಗೆ ಕಣ್ಣಿನ ಗಾಯವಾಗಿದೆ,' ಎಂದು WWE ಹೇಳಿಕೆ ಮೂಲಕ ತಿಳಿಸಿದೆ.

ಯಾರೀ ರೇ ಮಿಸ್ಟೀರಿಯೋ?
ಆಸ್ಕರ್ ಗುಟೈರೆಜ್ ಹೆಸರಿನ ಅಮೆರಿಕಾದ ರಸ್ಲರ್, ರೇ ಮಿಸ್ಟೀರಿಯೋ ಎಂದೇ ಹೆಚ್ಚು ಖ್ಯಾತರು. ಯಾಕೆಂದರೆ ಗುಟೈರೆಜ್ ರಿಂಗ್‌ಗೆ ಎಂಟ್ರಿಯಾಗೋದೇ ರೇ ಮಿಸ್ಟೀರಿಯೋ ಹೆಸರಿನಿಂದ. ಮೆಕ್ಸಿಕನ್-ಅಮೇರಿಕನ್ ವೃತ್ತಿಪರ ರಸ್ಲರ್, 45ರ ಹರೆಯದ ರೇ ಮಿಸ್ಟೀರಿಯೋ ಅವರನ್ನು ಪ್ರೊ ರಸ್ಲಿಂಗ್ ಇತಿಹಾಸದಲ್ಲಿ ಶ್ರೇಷ್ಠ ಕ್ರೂಸರ್ ವೇಟ್ ಎಂದು ಪರಿಗಣಿಸಲಾಗಿದೆ.

ನಿವೃತ್ತಿ ನೀಡಲಿರುವ ಇತರ ಸ್ಟಾರ್‌ಗಳು
ಕ್ಯಾನ್ಸರ್ ಖಾಯಿಲೆಯಿಂದ ತಾತ್ಕಾಲಿಕ ವಿದಾಯ ಘೋಷಿಸಿದ್ದ ರೋಮನ್ ರೇನ್ಸ್ ಮತ್ತೆ ಸುಧಾರಿಸಿ ರಿಂಗ್‌ಗೆ ಆಗೀಗ ಮರಳುತ್ತಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಹಲವು ಸ್ಟಾರ್‌ಗಳು ನಿವೃತ್ತಿ ನೀಡಲಿದ್ದಾರೆ. ಸ್ಟೋನ್ ಕೋಲ್ಡ್ ಸ್ಟೀವ್ ಆಸ್ಟಿನ್, ದಿ ರಾಕ್, ಶಾನ್ ಮೈಕೆಲ್ಸ್, ಬಟಿಸ್ಟಾ ಇವರೆಲ್ಲ ಸದ್ಯ ಸಕ್ರಿಯವಾಗಿರುವ ರಸ್ಲರ್‌ಗಳಲ್ಲ. ಇನ್ನು ಕೇನ್, ದಿ ಅಂಡರ್‌ಟೇಕರ್, ಟ್ರಿಪಲ್ ಎಚ್, ಎಡ್ಜ್, ಜಾನ್ ಸೆನಾ ಇವರೆಲ್ಲಾ ತೀರಾ ವಿರಳವಾಗಿ ರಿಂಗ್‌ಗೆ ಬರುತ್ತಿದ್ದಾರೆ. ಇದರರ್ಥ ಇವರಲ್ಲಿ ಹೆಚ್ಚಿನವರು ನಿವೃತ್ತಿಯ ಅಂಚಿನಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications