ಸೃಜನಶೀಲ ಕುಸ್ತಿ ಪಟು ಬ್ರೇ ವ್ಯಾಟ್ ತಮ್ಮ 36ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು WWE ಮುಖ್ಯ ಕಂಟೆಂಟ್ ಅಧಿಕಾರಿಯಾಗಿರುವ ಟ್ರಿಪಲ್ ಹೆಚ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ವ್ಯಾಟ್ ಅವರ ನಿಜವಾದ ಹೆಸರು ವಿಂಡ್‌ಹ್ಯಾಮ್ ರೊಟುಂಡಾ. ಡಬ್ಲ್ಯುಡಬ್ಲ್ಯುಇ ಕಣದಲ್ಲಿ ಸೃಜನಶೀಲ ಪಾತ್ರಗಳೊಂದಿಗೆ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು.
ಬ್ರೇ ವ್ಯಾಟ್ ಸಾವಿನ ಬಗ್ಗೆ ಟ್ರಿಪಲ್ ಹೆಚ್ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ. "ಡಬ್ಲ್ಯುಡಬ್ಲ್ಯುಇ ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾ ಅವರಿಂದ ಈಗಷ್ಟೇ ಕರೆ ಬಂದಿದ್ದು ನಮ್ಮ WWE ಕುಟುಂಬದ ಸದಸ್ಯ ಬ್ರೇ ವ್ಯಾಟ್ ಎಂದು ಖ್ಯಾತರಾಗಿರುವ ವಿಂಡ್‌ಹ್ಯಾಮ್ ರೊಟುಂಡಾ ಇಂದು ಮುಂಜಾನೆ ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ ಎಂಬ ದುರಂತ ಸುದ್ದಿಯನ್ನು ನಮಗೆ ತಿಳಿಸಿದ್ದಾರೆ. ಅವರಿಗಾಗಿ ನಾವು ಪ್ರಾರ್ಥಿಸುತ್ತೇವೆ. ಕುಟುಂಬದೊಂದಿಗೆ ನಾವಿದ್ದೇವೆ ಮತ್ತು ಈ ಸಮಯದಲ್ಲಿ ಪ್ರತಿಯೊಬ್ಬರೂ ಅವರ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ಕೇಳುತ್ತೇವೆ" ಎಂದು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು WWE ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು ಬ್ರೇ ವೈಟ್ ಸಾವಿಗೆ ಸಂತಾಪ ಸೂಚಿಸಿದೆ. "ಬ್ರೇ ವೈಟ್ ಎಂದೇ ಖ್ಯಾತವಾಗಿರುವ ವಿಂಡ್‌ಹ್ಯಾಮ್ ರೊಟುಂಡಾ ಅವರು ಆಗಸ್ಟ್ 24 ಗುರುವಾರ 36ರ ಹರೆಯದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ತೀವ್ರ ನೋವುಂಟು ಮಾಡಿದೆ. ಅವರ ಕುಟುಂಬ ಹಾಗೂ ಆಪ್ತರಿಗೆ WWE ಸಂತಾಪ ಸೂಚಿಸುತ್ತದೆ" ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಇನ್ನು ಡಬ್ಲ್ಯುಡಬ್ಲ್ಯುಇ ಜಗತ್ತಿನಲ್ಲಿ 'ದಿ ರಾಕ್' ಎಂದೇ ಖ್ಯಾತರಾಗಿರುವ ಡ್ವೇಯ್ನ್ ಜಾನ್ಸನ್ ಟ್ವಿಟ್ಟರ್‌ನಲ್ಲಿ "ಬ್ರೇ ವೈಟ್ ಅವರ ನಿಧನದ ಸುದ್ದಿ ಕೇಳಿ ನಾನು ಆಘಾತಗೊಂಡಿದ್ದೇನೆ. ಆತನ ಮೇಲೆ ಮತ್ತು ರೊಟುಂಡಾ ಕುಟುಂಬದ ಮೇಲೆ ನಾನು ಯಾವಾಗಲೂ ವಿಶೇಷವಾದ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದೆ. ಅವರ ಉಪಸ್ಥಿತಿಯನ್ನು ನಾನು ಬಹಳ ಇಷ್ಟ ಪಟ್ಟಿದ್ದೆ. ಪ್ರೋಮೋಗಳು ಮತ್ತು WWE ರಿಂಗ್‌ನಲ್ಲಿ ಅವರೊಂದಿಗೆ ಬಹಳ ಉತ್ತಮವಾದ ಕಾಲ ಕಳೆದಿದ್ದೇನೆ. ಅವರನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನು ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಠಿಣ ಸಂದರ್ಭವನ್ನು ಎದುರಿಸಲು ಅವರ ಕುಟುಂಬಕ್ಕೆ ಶಕ್ತಿ ದೊರೆಯಲಿ ಎಂದು ಬಯಸುತ್ತೇನೆ"
ಬ್ರೇ ವೈಟ್ ಅವರ WWE ರೆಸ್ಲಿಂಗ್ ಪ್ರಯಾಣವು 2009ರಲ್ಲಿ ಪ್ರಾರಂಭವಾಯಿತು. 2021 ಮತ್ತು 2022ರ ಮಧ್ಯೆ ಆಶ್ಚರ್ಯಕರವಾಗಿ ಹೊರಹೋಗಿದ್ದರು ಕೂಡ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಮ್‌ಬ್ಯಾಕ್ ಮಾಡಿದ್ದರು. ನಿಗೂಢ ಪಾತ್ರಗಳೊಮದಿಗೆ ಅವರು ಪ್ರೇಕ್ಷಕರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವಲ್ಲಿ ಯಶಸ್ವಿಯೂ ಆಗಿದ್ದರು.
ಕಠಿಣವಾದ ದ್ವಿಪಾತ್ರವನ್ನು ನಿರ್ವಹಿಸುವ ಮೂಲಕ ಅತ್ಯಂತ ಕ್ರಿಯಾತ್ಮಕ ವ್ಯಕ್ತಿ ಎಂದು ಕೂಡ ಬ್ರೇ ವೈಟ್ ಗುರುತಿಸಿಕೊಂಡಿದ್ದರು. 2023ರ ರಾಯಲ್ ರುಂಬಲ್‌ನಲ್ಲಿ ಬ್ರೇ ವ್ಯಾಟ್ ಕೊನೆಯ ಬಾರಿ ಡಬ್ಲ್ಯುಡಬ್ಲ್ಯುಇ ರಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಹಠಾತ್ ನಿಧನ ಕೋಟ್ಯಂತರ ಡಬ್ಲ್ಯುಡಬ್ಲ್ಯುಇ ಅಭಿಮಾನಿಗಳಿಗೆ ಆಘಾತ ನೀಡಿದೆ.