ಭಾರತ ಪ್ರಸಕ್ತ ವರ್ಷ ಹಲವು ಕ್ರೀಡೆಗಳಲ್ಲಿ ಅಮೋಘ ಸಾಧನೆಯನ್ನು ಮಾಡಿ ಸೈ ಎನಿಸಿಕೊಂಡಿದೆ. ಈ ಸಾಲಿನಲ್ಲಿ ಎದ್ದು ಕಾಣುವುದು ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳ ಪ್ರದರ್ಶನ. ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಪ್ರದರ್ಶನ ಸುಧಾರಣೆ ಆಗುತ್ತಿದೆ. ಈ ಬಾರಿಯೂ ಅಥ್ಲೀಟ್‌ಗಳು ಪದಕದ ಬೇಟೆಯನ್ನು ನಡೆಸಿದ್ದಾರೆ. ಆದರೆ ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಆಗದ ಒಂದು ಸಾಧನೆ ಈ ಒಲಿಂಪಿಕ್ಸ್‌ನಲ್ಲಿ ಆಗಿದೆ. ಒಂದೇ ಒಲಿಂಪಿಕ್ಸ್‌ನಲ್ಲಿ ಒಬ್ಬರೇ ಅಥ್ಲೀಟ್ ಎರಡು ಪದಕ ಗೆದ್ದ ದಾಖಲೆಗೆ ಪ್ಯಾರಿಸ್ ಒಲಿಂಪಿಕ್ಸ್ ಸಾಕ್ಷಿ ಆಗಿದೆ.
ಭಾರತದ ಒಲಿಂಪಿಕ್ಸ್ ಕ್ರೀಡಾ ಕೂಟದ ಇತಿಹಾಸದಲ್ಲಿ ಈ ಸಾಧನೆ ಎರಡನೇ ಬಾರಿ ಆಗಿದೆ. ಅಲ್ಲದೆ ಎರಡು ಪದಕಗಳನ್ನು ಒಂದೇ ಒಲಿಂಪಿಕ್ಸ್‌ನಲ್ಲಿ ಪಡೆದ ಮೊದಲ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆ ಸಹ ಭಾರತದ ಹೆಮ್ಮೆಯ ಪ್ರತಿಭೆ ಶೂಟರ್ ಮನು ಭಾಕರ್ ಅವರಿಗೆ ಸಲ್ಲುತ್ತದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಗದ ಸಾಧನೆಯನ್ನು ಮನು ಪ್ಯಾರಿಸ್‌ನಲ್ಲಿ ಮಾಡಿ ತೋರಿಸಿದ್ದಾರೆ. 22 ವರ್ಷದ ಮನು ಇನ್ನು ಭವಿಷ್ಯದಲ್ಲಿ ಹಲವು ದಾಖಲೆಗಳನ್ನು ಮಾಡುವ ಕನಸು ಹೊಂದಿದ್ದಾರೆ.

ಮನು ಭಾಕರ್ 2018 ರಲ್ಲಿ ನಡೆದಿದ್ದ ಯುಥ್ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಡಬಲ್ ಪದಕದ ಸಾಧನೆಯನ್ನು ಮಾಡಿದ್ದಾರೆ. ಇವರು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬಂಗಾರ ಹಾಗೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದರು. ಈ ವರ್ಷ ಇವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಅಮೋಘ ಪ್ರದರ್ಶನ ನೀಡಿ ಪದಕದ ಬೇಟೆ ನಡೆಸಿದ್ದಾರೆ.
ಭಾರತದ ಭರವಸೆಯ ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಥಿರ ಪ್ರದರ್ಶನ ನೀಡಿ ಅಂಕಗಳನ್ನು ಬಾಚಿಕೊಂಡು, ಕಂಚಿಗೆ ಕೊರಳು ಒಡ್ಡಿದ್ದಾರೆ. ಇನ್ನು ಇದೇ ಒಲಿಂಪಿಕ್ಸ್‌ನಲ್ಲಿ ಮನು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸರ್ಬಜೋತ್ ಸಿಂಗ್ ಜೊತೆ ಗೂಡಿ ಕಂಚು ಗೆದ್ದು ದಾಖಲೆ ಬರೆದಿದ್ದಾರೆ. ಈ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಸಾಧನೆ ಮಾಡಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ಮನು ಅವರು 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಭಾಗವಹಿಸಿ ಕೊಂಚದರಲ್ಲಿ ಪದಕದಿಂದ ದೂರ ಉಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನು ಪದಕಗಳ ಬೇಟೆಯನ್ನು ಮುಂದುವರೆಸಿದ್ದಾರೆ. ಇವರು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ 26 ಹಾಗೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ 6 ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಒಟ್ಟು 7 ಬೆಳ್ಳಿ ಪದಕ ಹಾಗೂ 9 ಕಂಚಿನ ಪದಕ ಇವರಿಗೆ ಸಂದಿವೆ.
2024ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಪದಕಗಳನ್ನು ಬಾಚಿಕೊಳ್ಳುತ್ತಿದ್ದಂತೆ, ಇತ್ತ ದೇಶದಲ್ಲಿ ಅವರ ಬ್ರ್ಯಾಂಡ್ ವ್ಯಾಲ್ಯು ಸಹ ಹೆಚ್ಚಾಗಿದೆ. ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಭಾರತ ಒಂದು ಬೆಳ್ಳಿ, ಐದು ಕಂಚಿನ ಪದಕ ಗೆದ್ದಿದ್ದು ಆರು ಪದಕಗಳನ್ನು ಆಥ್ಲೀಟ್‌ಗಳು ಬಾಚಿಕೊಂಡಿದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.