ಕ್ಯಾನ್ಸರ್ ರೋಗದ ವಿರುದ್ಧ ಗೆದ್ದು ಬರಲು ವಿಫಲರಾದ ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಹೀತ್ ಸ್ಟ್ರೀಕ್ ಭಾನುವಾರ, ಸೆಪ್ಟೆಂಬರ್ 3ರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.

ಹೀತ್ ಸ್ಟ್ರೀಕ್ ನಿಧನವು ಅವರ ಕುಟುಂಬಕ್ಕೆ ಮತ್ತು ಪ್ರಪಂಚದಾದ್ಯಂತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತದ ಸುದ್ದಿಯಾಗಿದೆ. ಇತ್ತೀಚಿಗೆ ಅವರ ನಿಧನದ ಸುಳ್ಳು ವದಂತಿಗಳು ವರದಿಯಾಗಿದ್ದವು. ಆದರೆ, ಹೀತ್ ಸ್ಟ್ರೀಕ್ ಸಾವಿನ ಸುದ್ದಿಯನ್ನು ಅವರ ಕುಟುಂಬ ಸದಸ್ಯರು ಈ ಬಾರಿ ಖಚಿತಪಡಿಸಿದ್ದಾರೆ.
ಹೀತ್ ಸ್ಟ್ರೀಕ್ ಅವರ ನಿಧನದ ಸುದ್ದಿಯನ್ನು ಅವರ ಪತ್ನಿ ನಾಡಿನ್ ಸ್ಟ್ರೀಕ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪತಿಯ ನೆನಪಿಗಾಗಿ ಮನದಾಳದ ಸಂದೇಶ ತಿಳಿಸಿದ್ದಾರೆ.
"ಈ ಮುಂಜಾನೆ, (ಭಾನುವಾರ, ಸೆಪ್ಟೆಂಬರ್ 3, 2023) ನನ್ನ ಜೀವನದ ಅತ್ಯಂತ ದೊಡ್ಡ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆ, ತನ್ನ ಮನೆಯಿಂದ ದೇವತೆಗಳೊಂದಿಗೆ ಇರಲು ಹೋಗಿದ್ದಾರೆ. ಅವರು ತಮ್ಮ ಕೊನೆಯ ದಿನಗಳನ್ನು ಕುಟುಂಬ ಮತ್ತು ಹತ್ತಿರದ ಪ್ರೀತಿಪಾತ್ರರಿಂದ ಸುತ್ತುವರಿಯಲು ಬಯಸಿದ್ದರು. ಅವರು ಪ್ರೀತಿ ಮತ್ತು ಶಾಂತಿಯಿಂದ ಆವರಿಸಲ್ಪಟ್ಟಿದ್ದರು ಮತ್ತು ಅವರು ಒಬ್ಬಂಟಿಯಾಗಿ ಹೊರಡಲಿಲ್ಲ. ನಮ್ಮ ಆತ್ಮಗಳು ಸ್ಟ್ರೀಕಿಯೊಂದಿಗೆ ಸೇರಿಕೊಂಡಿವೆ, ನಾನು ನಿನ್ನನ್ನು ಮತ್ತೆ ಹಿಡಿದಿಟ್ಟುಕೊಳ್ಳುವೆ," ಎಂದು ನಾಡಿನ್ ಸ್ಟ್ರೀಕ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಉತ್ತರ ಮಾಟಬೆಲೆಲ್ಯಾಂಡ್‌ನ ಇನ್ಯಾತಿಯಲ್ಲಿರುವ ಕುಟುಂಬದ ಎಂಥೋಕೋಜ್ವೆನಿ ಫಾರ್ಮ್‌ನಲ್ಲಿ ಹೀತ್ ಸ್ಟ್ರೀಕ್ ನಿಧನರಾದರು. ಸ್ಟ್ರೀಕ್ ಅವರ ತಂದೆ ಕೂಡ ತಮ್ಮ ಮಗನ ನಿಧನವನ್ನು ಖಚಿತಪಡಿಸಿದರು.
"ಹೀತ್ ಸ್ಟ್ರೀಕ್ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಮಾರು ಆರು ತಿಂಗಳ ಕಾಲ ಅವರು ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು. ಅವರು ಭಾನುವಾರ ಮುಂಜಾನೆ 1 ಗಂಟೆಗೆ ನಿಧನರಾದರು," ಎಂದು ಡೆನಿಸ್ ಸ್ಟ್ರೀಕ್ ತಿಳಿಸಿದ್ದಾರೆ.
ಹೀತ್ ಸ್ಟ್ರೀಕ್ ಅವರನ್ನು ಜಿಂಬಾಬ್ವೆ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೀತ್ ಸ್ಟ್ರೀಕ್ ಅವರ ವೃತ್ತಿಜೀವನವು ಅತ್ಯುತ್ತಮವಾಗಿದೆ. ಅವರು ರಾಷ್ಟ್ರೀಯ ತಂಡಕ್ಕಾಗಿ ಆಡಿದಾಗಲೆಲ್ಲಾ, ಅವರು ನಿರ್ದಿಷ್ಟ ಕೌಶಲ್ಯ ಮತ್ತು ಸೊಬಗಿನೊಂದಿಗೆ ಪ್ರದರ್ಶನ ನೀಡಿದ್ದರು.
ಹೀತ್ ಸ್ಟ್ರೀಕ್ ಕ್ರಿಕೆಟ್ ದಾಖಲೆ
ಹೀತ್ ಸ್ಟ್ರೀಕ್ ಅವರು ಜಿಂಬಾಬ್ವೆ ತಂಡದ ಪರ 65 ಟೆಸ್ಟ್ ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ್ದರು ಮತ್ತು ಕ್ರಮವಾಗಿ 1990 ಮತ್ತು 2943 ರನ್ ಗಳಿಸಿದ್ದಾರೆ.
ಆದರೆ, ಅವರ ಬೌಲಿಂಗ್ ಪರಾಕ್ರಮವೇ ಅವರನ್ನು ಉಳಿದವರಿಗಿಂತ ಭಿನ್ನವಾಗಿರಿಸಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ 216 ಮತ್ತು ಏಕದಿನ ಪಂದ್ಯಗಳಲ್ಲಿ 239 ವಿಕೆಟ್‌ಗಳನ್ನು ಕಬಳಿಸಿದ ಹೀತ್ ಸ್ಟ್ರೀಕ್, ಎರಡೂ ಮಾದರಿಗಳಲ್ಲಿ ಜಿಂಬಾಬ್ವೆ ತಂಡದ ಪರ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಉಳಿದಿದ್ದಾರೆ.